ಬರೇಲಿಯಲ್ಲಿ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯ ಬಳಿಕ ನಿರಂಕುಶ ಬಂಧನಗಳು, ಉದ್ದೇಶಿತ ನೆಲಸಮಗಳು: ಎಪಿಸಿಆರ್ ಸತ್ಯಶೋಧನಾ ವರದಿ
Photo credit: APCR
ಬರೇಲಿ(ಉ.ಪ್ರ.),ಅ.11: ಬರೇಲಿಯಲ್ಲಿ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯ ಬಳಿಕ ಹಲವಾರು ಕಾರ್ಯವಿಧಾನ ಉಲ್ಲಂಘನೆಗಳು, ನಿರಂಕುಶ ಬಂಧನಗಳು ಮತ್ತು ಉದ್ದೇಶಿತ ನೆಲಸಮ ಕಾರ್ಯಾಚರಣೆಗಳನ್ನು ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್‌ನ(ಎಪಿಸಿಆರ್) ಸತ್ಯಶೋಧನಾ ವರದಿಯು ಆರೋಪಿಸಿದೆ. ಸರಕಾರದ ಪ್ರತಿಕ್ರಿಯೆಯು ಧಾರ್ಮಿಕ ಅಭಿವ್ಯಕ್ತಿಗಾಗಿ ಸಾಮೂಹಿಕ ಶಿಕ್ಷೆ ಮತ್ತು ಅಪರಾಧೀಕರಣಕ್ಕೆ ಸಮನಾಗಿದೆ ಎಂದು ವರದಿಯು ನಿರ್ಧಾರಕ್ಕೆ ಬಂದಿದೆ.
ಮೌಲಾನಾ ತಾಕೀರ್ ರಝಾ ಖಾನ್ ನೇತೃತ್ವದ ಪ್ರದರ್ಶನವು ಕಾನ್ಪುರದಲ್ಲಿ ಈದ್ ಮಿಲಾದುನ್ನಬಿ ಸಂದರ್ಭದಲ್ಲಿ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಪೋಲಿಸರು ಮುಸ್ಲಿಮರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಹಿನ್ನೆಲೆಯಲ್ಲಿ ಐ ಲವ್ ಮುಹಮ್ಮದ್ ಅಭಿಯಾನವನ್ನು ಬೆಂಬಲಿಸಿ ಜಿಲ್ಲಾಡಳಿತಕ್ಕೆ ನಿವೇದನೆಯನ್ನು ಸಲ್ಲಿಸಲು ಉದ್ದೇಶಿಸಿತ್ತು. ಪೂರ್ವಭಾವಿ ಪ್ರಕಟಣೆಗಳ ಹೊರತಾಗಿಯೂ ಬರೇಲಿ ಆಡಳಿತವು ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಿತ್ತು. ಸೆ.26,2025ರಂದು ಶುಕ್ರವಾರದ ಪ್ರಾರ್ಥನೆಗಳ ಬಳಿಕ ಭಾರೀ ಗುಂಪು ಜಮಾವಣೆಗೊಂಡಿದ್ದು,ಕೆಲವು ಪ್ರದೇಶಗಳಲ್ಲಿ ಘರ್ಷಣೆಗಳು ಭುಗಿಲೇಳುವ ಮುನ್ನ ಹೆಚ್ಚಿನವರು ಶಾಂತಿಯುತವಾಗಿ ಚದುರಿದ್ದರು.
ವರದಿಯ ಪ್ರಕಾರ ಪೋಲಿಸರು ಯಾವುದೇ ಮುನ್ನೆಚ್ಚರಿಕೆಯನ್ನು ನೀಡದೇ ಬಲ ಪ್ರಯೋಗಿಸಿದ್ದು,ಇದು ಜನರು ಗಾಯಗೊಳ್ಳಲು ಮತ್ತು ಕೋಲಾಹಲಕ್ಕೆ ಕರಣವಾಗಿತ್ತು. ಅಂದು ರಾತ್ರಿ ಮೌಲಾನಾ ತಾಕೀರ್ ರಝಾ ಸೇರಿದಂತೆ 2,000ಕ್ಕೂ ಅಧಿಕ ಜನರ ವಿರುದ್ಧ 10ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದ್ದು,ಸರಕಾರದ ವಿರುದ್ಧ ದಂಗೆ ಸೇರಿದಂತೆ ಹಲವಾರು ಆರೋಪಗಳನ್ನು ಹೊರಿಸಲಾಗಿತ್ತು. ಈ ಎಫ್‌ಐಆರ್‌ಗಳನ್ನು ಅಸ್ಪಷ್ಟ,ಪುನರಾವರ್ತಿತ ಮತ್ತು ಅತ್ಯಂತ ಕಠೋರ ಎಂದು ಬಣ್ಣಿಸಿರುವ ಎಪಿಸಿಆರ್,ಸಶಸ್ತ್ರ ದಂಗೆ ಅಥವಾ ದ್ವೇಷ ಭಾಷಣದ ಯಾವುದೇ ಪುರಾವೆಯಿಲ್ಲದೆ ಅಧಿಕಾರಿಗಳು ಕಠಿಣ ಕ್ರಿಮಿನಲ್ ಕಲಮ್‌ಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದೆ.
ಅ.7ರ ವೇಳೆಗೆ ಕನಿಷ್ಠ 89 ಜನರನ್ನು ಬಂಧಿಸಲಾಗಿದ್ದು,ಅವರಿಗೆ ಬಂಧನಕ್ಕೆ ಕಾರಣಗಳನ್ನು ತಿಳಿಸಿರಲಿಲ್ಲ ಅಥವಾ ಬಂಧನದ ವಾರಂಟ್‌ಗಳನ್ನು ತೋರಿಸಿರಲಿಲ್ಲ. ಎಫ್‌ಐಆರ್ ಪ್ರತಿಗಳನ್ನು ತಡೆಹಿಡಿಯಲಾಗಿದೆ ಮತ್ತು ಇದು ಕಾನೂನಿನ ನೆರವನ್ನು ಪಡೆದುಕೊಳ್ಳುವಲ್ಲಿ ವಿಳಂಬಕ್ಕೆ ಕಾರಣವಾಗಿದೆ ಎಂದು ವಕೀಲರು ಸತ್ಯಶೋಧನಾ ತಂಡಕ್ಕೆ ತಿಳಿಸಿದ್ದಾರೆ.
ಆರೋಪಿ ಮುಸ್ಲಿಮರಿಗೆ ಸೇರಿದ ಆಸ್ತಿಗಳನ್ನು ಧ್ವಂಸಗೊಳಿಸಿದ್ದನ್ನೂ ಎಪಿಸಿಆರ್ ಖಂಡಿಸಿದೆ. ಇವುಗಳಲ್ಲಿ ನ್ಯಾಯಾಂಗ ವಿವಾದದಲ್ಲಿರುವ ವಕ್ಫ್ ಆಸ್ತಿಗಳೂ ಸೇರಿವೆ.
ಆರ್ಥಿಕ ನಷ್ಟ,ಇಂಟರ್ನೆಟ್ ಸ್ಥಗಿತ ಜೊತೆಗೆ ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳ ನಿಯೋಜನೆಯನ್ನೂ ಎತ್ತಿ ತೋರಿಸಿರುವ ವರದಿಯು,ಇದು ಭೀತಿ ಮತ್ತು ದಬ್ಬಾಳಿಕೆಯ ವಾತಾವರಣವನ್ನು ಸೃಷ್ಟಿಸಿತ್ತು ಎಂದು ಹೇಳಿದೆ.
ಸರಕಾರಿ ಅಧಿಕಾರಿಗಳು ಅತಿಯಾದ ಬಲವನ್ನು ಪ್ರಯೋಗಿಸಿದ್ದರು, ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲು ವಿಫಲರಾಗಿದ್ದರು ಹಾಗೂ ಸಮಾವೇಶ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದರು ಎಂದು ತನ್ನ ಅಂತಿಮ ಷರಾದಲ್ಲಿ ಹೇಳಿರುವ ಎಪಿಸಿಆರ್,ಪೋಲಿಸ್ ಕ್ರಮಗಳ ಕುರಿತು ಸ್ವತಂತ್ರ ತನಿಖೆ,ಸೂಕ್ತ ಪ್ರಕ್ರಿಯೆಯ ಮರುಸ್ಥಾಪನೆ ಮತ್ತು ಕಾನೂನುಬಾಹಿರ ಬಲಪ್ರಯೋಗ ಅಥವಾ ಆಸ್ತಿಗಳ ವಶದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಉತ್ತರದಾಯಿತ್ವಕ್ಕಾಗಿ ಆಗ್ರಹಿಸಿದೆ.