#Apology ಟ್ರೆಂಡ್ ವೈರಲ್; ಕ್ಷಮೆ ಕೇಳದೇ ಕ್ಷಮೆಯಾಚಿಸುತ್ತಿರುವ ಬ್ರ್ಯಾಂಡ್ ಗಳು, ಸಂಸ್ಥೆಗಳು!
ಟ್ರೆಂಡ್ ಗೆ ಸೇರಿಕೊಂಡ ಮಾಧ್ಯಮಗಳು; ಚಪ್ಪಾಳೆ ತಟ್ಟುತ್ತಿಲ್ಲ, ಉಗಿಯುತ್ತಿದ್ದಾರೆ ಎಂದ ಜನರು
pc: Instagram
ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಅಧಿಕೃತ ಕ್ಷಮೆಯಾಚನೆಯ ಪ್ರವೃತ್ತಿ ವೈರಲ್ ಆಗಿದೆ. ಬಾಲಿವುಡ್ ನ ಪ್ರಮುಖ ನಿರ್ಮಾಣ ಸಂಸ್ಥೆಗಳಾದ ಧರ್ಮ ಪ್ರೊಡಕ್ಷನ್ಸ್, ಮ್ಯಾಡಾಕ್ ಫಿಲ್ಮ್ಸ್, ಟಿ–ಸೀರೀಸ್ ಸೇರಿದಂತೆ ನಟ ಧನುಷ್ ಮತ್ತು ಕೃತಿ ಸನೋನ್ ಅಭಿನಯದ ‘ತೇರೆ ಇಷ್ಕ್ ಮೇ’ ಚಿತ್ರದ ತಂಡವೂ ಈ ಟ್ರೆಂಡ್‌ನಲ್ಲಿ ಪಾಲ್ಗೊಂಡಿದೆ.
ಆದರೆ ಈ ಕ್ಷಮೆಯಾಚನೆಗಳು ಸಾಮಾನ್ಯ ಕ್ಷಮೆಯಾಚನೆಗಳಂತಿಲ್ಲ. ಇಲ್ಲಿ ಕಂಪೆನಿಗಳು ಯಾವುದೇ ತಪ್ಪಿಗೆ ಕ್ಷಮೆ ಕೇಳುತ್ತಿಲ್ಲ. ಬದಲಿಗೆ ತಮ್ಮ ಯಶಸ್ಸು, ಜನಪ್ರಿಯತೆ ಮತ್ತು ಗ್ರಾಹಕರ ಮೆಚ್ಚುಗೆಯ ಬಗ್ಗೆ ತಮಾಷೆಯ ಶೈಲಿಯಲ್ಲಿ ‘ಕ್ಷಮೆ ಕೇಳುತ್ತಿರುವಂತೆ’ ಪೋಸ್ಟ್‌ಗಳನ್ನು ಮಾಡುತ್ತಿವೆ. ಆ ಮೂಲಕ ತಮ್ಮದೇ ಬೆನ್ನನ್ನು ತಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿವೆ.
ಹಾಸ್ಯ, ಚಾತುರ್ಯ ಮತ್ತು ಮಾರ್ಕೆಟಿಂಗ್‌ಗಳ ಸಂಯೋಜನೆಯಾದ ಈ ಟ್ರೆಂಡ್, ಇಂದಿನ ಡಿಜಿಟಲ್ ಪ್ರಚಾರದ ಹೊಸ ಮುಖವಾಗಿ ಹೊರಹೊಮ್ಮಿದೆ.
ಇವೆಲ್ಲವೂ ತಪ್ಪೊಪ್ಪಿಗೆ ಅಲ್ಲದ ಕ್ಷಮೆಯಾಚನೆಗಳು. ಈ ಟ್ರೆಂಡ್ ನ ಭಾಗವಾಗಿ ಹಲವು ಕಂಪೆನಿಗಳು ತಮ್ಮ ಅಧಿಕೃತ ಲೆಟರ್‌ಹೆಡ್‌ನಲ್ಲಿ “ಅಧಿಕೃತ ಕ್ಷಮೆಯಾಚನೆ” ಪತ್ರಗಳನ್ನು ಬಿಡುಗಡೆ ಮಾಡಿವೆ.ಅದರಲ್ಲಿ ವಿಷಾದದ ಬದಲು ತಮಾಷೆ ಮತ್ತು ಹೆಮ್ಮೆ ತುಂಬಿವೆ.
ಫೋಕ್ಸ್ ವ್ಯಾಗನ್ ಇಂಡಿಯಾವು “ತುಂಬಾ ಆಕರ್ಷಕ ಕಾರುಗಳನ್ನು ತಯಾರಿಸಿದ್ದಕ್ಕಾಗಿ ಕ್ಷಮಿಸಿ", ಎಂದು ಕ್ಷಮೆ ಕೇಳಿದೆ.
“ನಮ್ಮ ಮಿಲ್ಕ್‌ಶೇಕ್‌ಗಳು ಜನರನ್ನು ಮತ್ತೆ ಮತ್ತೆ ನಮ್ಮತ್ತ ಹಿಂತಿರುಗುವಂತೆ ಮಾಡುತ್ತಿರುವುದಕ್ಕೆ ವಿಷಾದಿಸುತ್ತೇವೆ", ಎಂದು ಕೆವೆಂಟರ್ಸ್ ಕ್ಷಮೆಯಾಚನೆ ಮಾಡಿದೆ.
“ನಮ್ಮ ಸಿಮೆಂಟ್ ಅಷ್ಟೊಂದು ಬಲವಾಗಿರುವುದರಿಂದ ಜನರಿಗೆ ಗೋಡೆ ಕೊರೆಯಲು, ಮೊಳೆ ಹೊಡೆಯಲು ಸಾಧ್ಯವಾಗುತ್ತಿಲ್ಲ", ಎಂದು ಅದಾನಿ ಅಂಬುಜಾ ಸಿಮೆಂಟ್ ಖೇದ ವ್ಯಕ್ತಪಡಿಸಿದೆ.
ಜಿಎಸ್ಟಿ ಕಡಿತದ ಬಳಿಕ ನಮ್ಮ ಬೆಲೆಗಳು ತುಂಬಾ ಕಡಿಮೆ ಇರುವುದರಿಂದ ಗ್ರಾಹಕರಿಗೆ ಬೇರೆಡೆ ಬೆಲೆ ಹೋಲಿಕೆ ಮಾಡಲು ಸಮಯ ಸಿಗುತ್ತಿಲ್ಲ ಕ್ಷಮಿಸಿ!” ಎಂದು ರಿಲಯನ್ಸ್ ಡಿಜಿಟಲ್ ತನ್ನ ವಿಶಿಷ್ಟ ಶೈಲಿಯಲ್ಲಿ ಕ್ಷಮೆ ಕೇಳಿದೆ.
ಕ್ಷಮೆ ಕೇಳುವ ಪ್ರವೃತ್ತಿ ಇಲ್ಲಿಗೆ ಮುಗಿದಿಲ್ಲ. ಸ್ಕೋಡಾ, ಹಲ್ದಿರಾಮ್ಸ್, ಪಿವಿಆರ್–ಐನಾಕ್ಸ್, ಬನಾನಾ ಲೀಫ್, ಕ್ಯಾಶಿಫೈ, ಗಾರ್ನಿಯರ್ ಮುಂತಾದ ಬ್ರ್ಯಾಂಡ್‌ಗಳೂ ಈ ಟ್ರೆಂಡ್‌ನಲ್ಲಿ ಭಾಗಿಯಾಗಿವೆ. ತಪ್ಪಾಯ್ತು ಕ್ಷಮಿಸಿ ಎಂದು ಕ್ಷಮೆಯಲ್ಲೇ ಮೋಡಿ ಮಾಡಿವೆ.
ಈ ಕ್ಷಮೆ ಕೇಳುವ ಟ್ರೆಂಡ್ ಮೊದಲು 2024ರಲ್ಲಿ ಫಿಲಿಪೈನ್ಸ್‌ನಲ್ಲಿ ಪ್ರಾರಂಭವಾಯಿತು. ನಿಜವಾದ ಕಾರ್ಪೊರೇಟ್ ಕ್ಷಮೆಯಾಚನೆ ಪತ್ರಗಳ ಮಾದರಿಯನ್ನು ಅನುಕರಿಸಿ, ಆದರೆ ಅದರ ಅರ್ಥವನ್ನು ತಿರುಗಿಸುವ ಮೂಲಕ ವೈರಲ್ ಆಯಿತು.ಈಗ ಭಾರತದಲ್ಲಿ ಕಂಪೆನಿಗಳು ಅದನ್ನು ಹೊಸ ಮಾರ್ಕೆಟಿಂಗ್ ತಂತ್ರವಾಗಿ ಬಳಸುತ್ತಿವೆ.
ಮಾರ್ಕೆಟಿಂಗ್ ತಜ್ಞರ ಪ್ರಕಾರ, ಈ ರೀತಿಯ ಟ್ರೆಂಡ್‌ಗಳು ಕಂಪೆನಿಗಳನ್ನು ಹೆಚ್ಚು ಮಾನವೀಯ ಮತ್ತು ಸ್ವಯಂ ಅರಿವುಳ್ಳ ಶೈಲಿಯಲ್ಲಿ ತೋರಿಸುತ್ತವೆ. ಹಾಸ್ಯ ಮತ್ತು ಸೃಜನಶೀಲತೆಯ ಮೂಲಕ ಗ್ರಾಹಕರಲ್ಲಿ ನಂಟು ಬೆಳೆಸಲು ಸಹಕಾರಿಯಾಗುತ್ತದೆ.
“ಈ ರೀತಿಯ ಪೋಸ್ಟ್‌ಗಳು ನೇರ ಜಾಹೀರಾತಿನಂತಿಲ್ಲ, ಆದರೆ ಅದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿವೆ,” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಎಲ್ಲರೂ ಈ ಟ್ರೆಂಡ್‌ನ್ನು ಮೆಚ್ಚಿಲ್ಲ. ಕೆಲವರು “ಕ್ಷಮೆಯಾಚನೆ” ಎನ್ನುವ ಪದವನ್ನು ಹಾಸ್ಯದ ವಿಷಯವನ್ನಾಗಿಸುವುದರಿಂದ ಅದರ ಗಂಭೀರತೆ ದುರ್ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಬ್ಬರು, “ಕ್ಷಮೆಯಾಚನೆ ಎಂದರೆ ಜವಾಬ್ದಾರಿ. ಅದನ್ನು ಮನರಂಜನೆಯಾಗಿಸುವುದು ಅದರ ಅರ್ಥವನ್ನು ಬದಲಿಸುತ್ತದೆ", ಎಂದು ಹೇಳಿದ್ದಾರೆ.
ಮಾಧ್ಯಮಗಳೂ ಈ ‘ ಕ್ಷಮಿಸಿ’ ಟ್ರೆಂಡ್ ಗೆ ಎಂಟ್ರಿ ಕೊಟ್ಟಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದುಸ್ತಾನ್ ಟೈಮ್ಸ್, NDTV, ಎಕನಾಮಿಕ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಸೇರಿದಂತೆ ಹಲವು ಮಾಧ್ಯಮಗಳು ಕ್ಷಮೆ ಕೇಳಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತ, ಚಿಂತಕ ರಾಜಾರಾಮ್ ತಲ್ಲೂರು “ಜನರು ಚಪ್ಪಾಳೆ ತಟ್ಟುತ್ತಿಲ್ಲ, ಉಗಿಯುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅವರು, ಈ ಕ್ಷಮೆಯಾಚನೆಗಳ ಹಿಂದೆ ನಿಜವಾದ ಪಶ್ಚಾತ್ತಾಪವಿಲ್ಲದೆ ಟ್ರೆಂಡ್ ಅನುಸರಣೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
“ಮಾರುಕಟ್ಟೆಯ ನಕ್ರಾಗಳಿಗೆ ‘ದೊಡ್ಡ ಬಟ್ಟಲಮ್ಮ’ ಆಗಿ ಓಡೋಡಿ ಬರುವ ಡಿಯರ್ ಮೀಡಿಯಾಗಳೇ, ಈಗ ಟ್ರೆಂಡ್ ಎಂದು ಕ್ಷಮೆ ಕೇಳ್ತಿದ್ದಾರೆ. ಎಷ್ಟು ಸಾಬೂನು ಹಾಕಿ ತೊಳೆದರೂ, ನಿಮ್ಮ ಬ್ರ್ಯಾಂಡ್‌ನ ಮಸಿ ತೊಳೆದು ಹೋಗುವುದಿಲ್ಲ ಎಂದು ರಾಜಾರಾಮ್ ಅವರು ವ್ಯಂಗ್ಯವಾಡಿದ್ದಾರೆ.
ಅವರು ಮಾಧ್ಯಮಗಳ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನಾಡಿನ ಸಹನೆ, ಸಾಮರಸ್ಯ ಹಾಳುಮಾಡಿರುವುದು, ಜನಹಿತ ಮರೆತು ಅಧಿಕಾರದ ಜೀತದ ಆಳುಗಳಾಗಿರುವುದು, ಸುಳ್ಳು-ಕಪಟ ಸುದ್ದಿ ಹರಡುವ ಮೂಲಕ ಸುದ್ದಿಯ ಮಾನಹಾನಿ ಮಾಡಿರುವುದು, ಸಂವಿಧಾನದ ನಾಲ್ಕನೇ ಕಂಬ ಎನ್ನಿಸಿಕೊಂಡು ರಾಜಕಾರಣಿಗಳ ಗೂಟವಾಗಿರುವುದು ಇವುಗಳಿಗೆ ನಿಜವಾದ ಕ್ಷಮೆಯಾಚನೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಕಳೆದ ಎರಡು ದಶಕಗಳಿಂದ ಭ್ರಷ್ಟಾಚಾರ, ಅನಾಚಾರ ಕಣ್ಣೆದುರೇ ನಡೆಯುತ್ತಿದ್ದರೂ ಮಾಧ್ಯಮಗಳು ಕಣ್ಣು ಮುಚ್ಚಿಕೊಂಡಿವೆ. ಬದುಕು, ಪರಿಸರ, ಗಾಳಿ, ನೀರು ವಿಷಪೂರಿತವಾಗುತ್ತಿದ್ದರೂ ಅದರ ವಿರುದ್ಧ ಧ್ವನಿ ಎತ್ತುವುದಕ್ಕಿಂತ ಅದರಲ್ಲಿ ಪಾಲು ಪಡೆದಿವೆ,” ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.