×
Ad

ಖತರ್‌ ಗೆ ಭಾರತದಿಂದ ಮೇಲ್ಮನವಿ ಸಲ್ಲಿಕೆ

Update: 2023-11-09 22:38 IST

Photo: MEA

ಹೊಸದಿಲ್ಲಿ: ಖತರ್‌ನಲ್ಲಿ ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಗಳಿಗೆ ಮರಣದಂಡನೆ ವಿಧಿಸಿರುವ ಪ್ರಕರಣದಲ್ಲಿ ಭಾರತವು ಮೇಲ್ಮನವಿಯನ್ನು ಸಲ್ಲಿಸಿದೆ. ಈವರೆಗೂ ಅಸ್ಪಷ್ಟವಾಗಿಯೇ ಉಳಿದಿರುವ ಕಾರಣಗಳಿಂದ ಈ ಸಿಬ್ಬಂದಿಗಳನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಖತರ್ ಅಧಿಕಾರಿಗಳು ಬಂಧಿಸಿದ್ದರು. ಕಳೆದ ತಿಂಗಳು ಅವರಿಗೆ ಮರಣದಂಡನೆಯನ್ನು ವಿಧಿಸಲಾಗಿದೆ.

ಸರಕಾರವು ಈಗಾಗಲೇ ಮೇಲ್ಮನವಿಯನ್ನು ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿಯವರು ಗುರುವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಖತರ್ ನ್ಯಾಯಾಲಯದ ತೀರ್ಪಿನಿಂದ ತನಗೆ ತೀವ್ರ ಆಘಾತವಾಗಿದೆ ಎಂದು ಭಾರತ ಸರಕಾರವು ಈ ಹಿಂದೆ ಹೇಳಿತ್ತು.

‘ಪ್ರಕರಣದ ವಿವರಗಳು ಲಭ್ಯವಾಗಿಲ್ಲ. ತೀರ್ಪನ್ನು ಗೌಪ್ಯವಾಗಿಡಲಾಗಿದೆ. ಅದನ್ನು ಕಾನೂನು ತಂಡದೊಂದಿಗೆ ಮಾತ್ರ ಹಂಚಿಕೊಳ್ಳಲಾಗಿದೆ. ನಾವು ಮುಂದಿನ ಕಾನೂನು ಕ್ರಮಗಳನ್ನು ಪರಿಶೀಲಿಸುತ್ತಿದ್ದೇವೆ ’ ಎಂದು ತಿಳಿಸಿದ ಬಾಗ್ಚಿ,‘ನಾವು ಎಂಟು ಮಾಜಿ ನೌಕಾಪಡೆ ಅಧಿಕಾರಿಗಳ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಈಗಾಗಲೇ ದಿಲ್ಲಿಯಲ್ಲಿ ಈ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ನಾವು ಸಾಧ್ಯವಿರುವ ಎಲ್ಲ ಕಾನೂನು ಮತ್ತು ರಾಜತಾಂತ್ರಿಕ ಬೆಂಬಲವನ್ನು ಮುಂದುವರಿಸುತ್ತೇವೆ ’ಎಂದು ಹೇಳಿದರು. ಈ ಸೂಕ್ಷ್ಮ ವಿಷಯದಲ್ಲಿ ಊಹಾಪೋಹಗಳ ವಿರುದ್ಧ ಅವರು ಎಚ್ಚರಿಕೆಯನ್ನು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News