ಅಮೃತಸರದಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದ ಸೇನೆ
PC : NDTV
ಅಮೃತಸರ(ಪಂಜಾಬ್): ಶನಿವಾರ ಬೆಳಗಿನ ಜಾವ ಅಮೃತಸರದ ಖಾಸಾ ಕಂಟೋನ್ಮೆಂಟ್ ಪ್ರದೇಶದ ಮೇಲೆ ಹಾರಾಡುತ್ತಿದ್ದ ಹಲವಾರು ಪಾಕ್ ಡ್ರೋನ್‌ಗಳನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.
ಅಮೃತಸರದ ವಾಯುಪ್ರದೇಶದಲ್ಲಿ ಹಲವಾರು ಡ್ರೋನ್‌ಗಳು ಕಂಡು ಬಂದ ಬಳಿಕ ಅವುಗಳನ್ನು ಭಾರತೀಯ ಸೇನೆಯು ನಾಶಗೊಳಿಸಿತು.
ಡ್ರೋನ್‌ನ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸೇನೆಯು,‘ನಮ್ಮ ಪಶ್ಚಿಮ ಗಡಿಗಳಲ್ಲಿ ಪಾಕಿಸ್ತಾನವು ಡ್ರೋನ್ ಮತ್ತು ಇತರ ದಾಳಿಗಳನ್ನು ಹೆಚ್ಚಿಸಿದೆ. ಇಂತಹ ಒಂದು ಘಟನೆಯಲ್ಲಿ ಶನಿವಾರ ನಸುಕಿನ ಐದು ಗಂಟೆಯ ಸುಮಾರಿಗೆ ಅಮೃತಸರದ ಖಾಸಾ ಕಂಟೋನ್ಮೆಂಟ್ ಪ್ರದೇಶದ ಮೇಲೆ ಹಲವಾರು ಶಸ್ತ್ರಸಜ್ಜಿತ ಶತ್ರು ಡ್ರೋನ್‌ಗಳ ಹಾರಾಡುತ್ತಿದ್ದು,ನಮ್ಮ ವಾಯು ರಕ್ಷಣಾ ಘಟಕಗಳು ಅವುಗಳನ್ನು ತಕ್ಷಣ ಹೊಡೆದುರುಳಿಸಿವೆ’ ಎಂದು ಹೇಳಿದೆ.
‘ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಮತ್ತು ನಾಗರಿಕರಿಗೆ ಅಪಾಯವನ್ನುಂಟು ಮಾಡುವ ಪಾಕಿಸ್ತಾನದ ಪ್ರಯತ್ನವು ಸ್ವೀಕಾರಾರ್ಹವಲ್ಲ. ಶತ್ರುರಾಷ್ಟ್ರದ ಕುತಂತ್ರಗಳನ್ನು ಭಾರತೀಯ ಸೇನೆಯು ವಿಫಲಗೊಳಿಸುತ್ತದೆ ’ಎಂದೂ ಪೋಸ್ಟ್‌ನಲ್ಲಿ ಹೇಳಲಾಗಿದೆ.