×
Ad

ಹುತಾತ್ಮರ ದಿನಕ್ಕೆ ಮುನ್ನ ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ:ಕಾಶ್ಮೀರದ ಮುಖ್ಯ ಧರ್ಮಗುರು

Update: 2025-07-11 21:49 IST

ಮಿರ್ವೈಝ್ ಉಮರ್ ಫಾರೂಕ್ | PTI

ಶ್ರೀನಗರ: ತನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಮತ್ತು ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿಲ್ಲ ಎಂದು ಕಾಶ್ಮೀರದ ಮುಖ್ಯ ಧರ್ಮಗುರು ಹಾಗೂ ಹುರಿಯತ್ ಕಾನ್ಫರೆನ್ಸ್ ನಾಯಕ ಮಿರ್ವೈಝ್ ಉಮರ್ ಫಾರೂಕ್ ಅವರು ಶುಕ್ರವಾರ ಹೇಳಿದ್ದಾರೆ.

ಜು.13ರ ಕಾಶ್ಮೀರ ಹುತಾತ್ಮರ ದಿನವನ್ನು ತನ್ನ ಪ್ರವಚನದಲ್ಲಿ ಉಲ್ಲೇಖಿಸಬಹುದು ಎಂಬ ಭಯದಿಂದ ಅಧಿಕಾರಿಗಳು ಈ ಕ್ರಮವನ್ನು ಕೈಗೊಂಡಿದ್ದಾರೆ ಎಂದು ಫಾರೂಕ್ ಎಕ್ಸ್ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

1931ರಲ್ಲಿ ಶ್ರೀನಗರ ಕೇಂದ್ರ ಕಾರಾಗೃಹದ ಹೊರಗೆ ಡೋಗ್ರಾ ಆಡಳಿತಗಾರ ಹರಿ ಸಿಂಗ್ ಅವರ ಸಶಸ್ತ್ರ ಪಡೆಗಳ ಗುಂಡಿಗೆ ಬಲಿಯಾಗಿದ್ದ 22 ಜನರ ಗೌರವಾರ್ಥ ಜು.13ನ್ನು ಹುತಾತ್ಮರ ದಿನ ಎಂದು ಗುರುತಿಸಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಆಗಸ್ಟ್ 2019ರಲ್ಲಿ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರ ಹುತಾತ್ಮರ ದಿನವನ್ನು ಸಾರ್ವಜನಿಕ ರಜಾದಿನಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಜೊತೆಗೆ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ)ನ ಸ್ಥಾಪಕ ಶೇಖ್ ಅಬ್ದುಲ್ಲಾ ಅವರ ಜನನ ಮತ್ತು ಮರಣ ದಿನಗಳಿಗೆ ನೀಡಲಾಗುತ್ತಿದ್ದ ರಜೆಗಳನ್ನೂ ರದ್ದುಗೊಳಿಸಲಾಗಿತ್ತು.

22 ಹುತಾತ್ಮರು ಮತ್ತು ನಂತರದ ಎಲ್ಲ ಹುತಾತ್ಮರ ತ್ಯಾಗಗಳು ಕಾಶ್ಮೀರದ ಸಾಮೂಹಿಕ ಸ್ಮರಣೆಯಲ್ಲಿ ಕೆತ್ತಲ್ಪಟ್ಟಿವೆ ಮತ್ತು ನಿರ್ಬಂಧಗಳು ಹಾಗೂ ನಿಷೇಧಗಳ ಮೂಲಕ ಅವುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಎಕ್ಸ್ ಪೋಸ್ಟ್‌ ನಲ್ಲಿ ಹೇಳಿರುವ ಫಾರೂಕ್,‘ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ತನ್ನ ಹುತಾತ್ಮರ ಬಲಿದಾನಗಳನ್ನು ಯಾವುದೇ ಕ್ರಿಯಾಶೀಲ ದೇಶವು ಮರೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.

ನಿರ್ಬಂಧಗಳನ್ನು ರದ್ದುಗೊಳಿಸುವಂತೆ ಮತ್ತು ಜು.13ರ ಹುತಾತ್ಮರಿಗೆ ಶಾಂತಿಯುತವಾಗಿ ಶ್ರದ್ಧಾಂಜಲಿಗಳನ್ನು ಸಲ್ಲಿಸಲು ಕಾಶ್ಮೀರದ ನಿವಾಸಿಗಳಿಗೆ ಅವಕಾಶ ನೀಡುವಂತೆ ಅಧಿಕಾರಿಗಳನ್ನು ಅವರು ಆಗ್ರಹಿಸಿದ್ದಾರೆ.

ಜು.13ನ್ನು ಹುತಾತ್ಮರ ದಿನವಾಗಿ ಅಧಿಕೃತ ಆಚರಣೆಯನ್ನು ಪುನರಾರಂಭಿಸುವಂತೆ ಎನ್‌ಸಿ ಮತ್ತು ಪಿಡಿಪಿ ಸೇರಿದಂತೆ ಜಮ್ಮುಕಾಶ್ಮೀರದ ಹಲವಾರು ಪ್ರಾದೇಶಿಕ ಪಕ್ಷಗಳು ಗುರುವಾರ ಆಗ್ರಹಿಸಿದ್ದವು.

ಜು.13 ಮತ್ತು ಶೇಖ್ ಅಬ್ದುಲ್ಲಾರ ಜನ್ಮದಿನವನ್ನು ಅಧಿಕೃತ ರಜಾದಿನಗಳನ್ನಾಗಿ ಮರುಸೇರ್ಪಡೆಗೊಳಿಸುವಂತೆ ಕೋರಿ ಜಮ್ಮುಕಾಶ್ಮೀರದ ಎನ್‌ಸಿ ಸರಕಾರವೂ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರಿಗೆ ಪತ್ರವನ್ನು ಬರೆದಿದೆ ಎಂದು ಪಕ್ಷದ ವಕ್ತಾರ ಇಮ್ರಾನ್ ನಬಿ ಸುದ್ದಿಸಂಸ್ಥೆಗೆ ತಿಳಿಸಿದರು.

ಜೊತೆಗೆ,ಜು.13ರಂದು ಹುತಾತ್ಮರನ್ನು ದಫನ ಮಾಡಲಾಗಿರುವ ಹಳೆಯ ನಗರದಲ್ಲಿಯ ಖಬರಸ್ತಾನಕ್ಕೆ ಭೇಟಿ ನೀಡಲು ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಾಗರ್ ನೇತೃತ್ವದ ನಿಯೋಗಕ್ಕೆ ಅವಕಾಶ ನೀಡುವಂತೆಯೂ ಎನ್‌ಸಿ ಕೋರಿಕೊಂಡಿದೆ ಎಂದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News