×
Ad

ಕರ್ಣಿ ಸೇನಾ ಮುಖ್ಯಸ್ಥರ ಹತ್ಯೆಯ ಪ್ರಮುಖ ಶಂಕಿತ ಆರೋಪಿಯ ಬಂಧನ

Update: 2024-01-03 19:39 IST

Photo: NDTV 

ಹೊಸದಿಲ್ಲಿ: ಕಳೆದ ತಿಂಗಳು ತಮ್ಮ ನಿವಾಸದಲ್ಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿಯವರ ಮುಖ್ಯ ಶಂಕಿತ ಆರೋಪಿ ಅಶೋಕ್ ಮೇಘವಾಲ್ ನನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ, ಈ ಪ್ರಕರಣದಲ್ಲಿ ಒಂಭತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ndtv.com ವರದಿ ಮಾಡಿದೆ.

ಇಂದು ರಾಜಸ್ಥಾನದ ಪಿಲನಿ ಗ್ರಾಮದ ಮೇಲೆ ಭಯೋತ್ಪಾದಕ ನಿಗ್ರಹ ದಳವಾದ ರಾಷ್ಟ್ರೀಯ ತನಿಖಾ ದಳವು 10 ಗಂಟೆಗಳ ಕಾಲ ದಾಳಿ ನಡೆಸಿದ ನಂತರ ಈ ಬಂಧನ ಜರುಗಿದೆ. ಒಟ್ಟಾರೆಯಾಗಿ ಈ ಪ್ರಕರಣದ ಸಂಬಂಧ ರಾಜಸ್ಥಾನ ಮತ್ತು ಹರ್ಯಾಣ ಸೇರಿದಂತೆ ಒಟ್ಟು 31 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳವು ದಾಳಿ ನಡೆಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ತನಿಖಾ ದಳವು, ದಾಳಿಗಳ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಪಿಸ್ತೂಲುಗಳು, ಶಸ್ತ್ರಾಸ್ತ್ರಗಳು, ಮೊಬೈಲ್ ಫೋನ್ ಗಳು, ಸಿಮ್ ಕಾರ್ಡ್ ಗಳು ಹಾಗೂ ಡಿವಿಆರ್ ಗಳು ಸೇರಿದಂತೆ ಡಿಜಿಟಲ್ ಸಾಧನಗಳು ಹಾಗೂ ಆರ್ಥಿಕ ವಹಿವಾಟುಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ಅಶೋಕ್ ಮೇಘವಾಲ್ ಬಳಿಯಿದ್ದ ಎಂಟು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮೇಘವಾಲ್ ನನ್ನು ವಿಚಾರಣೆಗೊಳಪಡಿಸಿದಾಗ ಇನ್ನೂ 22 ಶಸ್ತ್ರಾಸ್ತ್ರಗಳು ಪೂರೈಕೆಯಾಗಲು ಬಾಕಿ ಇದ್ದವು ಎಂಬ ಅಂಶ ಬೆಳಕಿಗೆ ಬಂದಿದೆ.

ಗ್ಯಾಂಗ್ ಸ್ಟರ್ ರೋಹಿತ್ ಗೋದಾರಾ ಜೊತೆ ಮೇಘವಾಲ್ ಗೆ ಸಂಪರ್ಕವಿತ್ತು ಎಂದು ಆರೋಪಿಸಲಾಗಿದ್ದು, ಲಾರೆನ್ಸ್ ಬಿಷ್ಣೋಯಿ ಗುಂಪಿನ ಜೊತೆ ಗುರುತಿಸಿಕೊಂಡಿರುವ ರೋಹಿತ್ ಗೋದಾರಾ, ಸುಖದೇವ್ ಸಿಂಗ್ ಗೊಗಮೇಡಿಯ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ.

ಇದಕ್ಕೂ ಮುನ್ನ, ಡಿ. 5ರಂದು ಮಹತ್ವದ ರಾಜಪೂತ್ ನಾಯಕರಾದ ಸುಖದೇವ್ ಸಿಂಗ್ ಗೊಗಮೇಡಿ ತಮ್ಮ ನಿವಾಸದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ತಮ್ಮ ನಾಲ್ವರು ಸಹಚರರೊಂದಿಗೆ ಚಹಾ ಕುಡಿಯುವಾಗ, ದಿಢೀರನೆ ಆ ನಾಲ್ವರ ಪೈಕಿ ಇಬ್ಬರು ಮಾತಿನ ಮಧ್ಯೆಯೆ ಮೇಲೆದ್ದು ಗೊಗಮೇಡಿಯ ಮೇಲೆ ಮನ ಬಂದಂತೆ ಗುಂಡು ಹಾರಿಸಿದ್ದರು. ಇದರಿಂದ ಸುಖದೇವ್ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News