ವಕ್ಫ್ ತಿದ್ದುಪಡಿ ಕಾಯಿದೆ ಹಿಂಪಡೆಯುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ: ಅಸದುದ್ದೀನ್ ಉವೈಸಿ
ಅಸದುದ್ದೀನ್ ಉವೈಸಿ | ANI
ಹೈದರಾಬಾದ್: ಕೇಂದ್ರ ಸರಕಾರ ಮುಸ್ಲಿಮರ ಹಕ್ಕಗಳನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ) ಎಐಎಂಐಎಂ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಸಾದುದ್ದೀನ್ ಉವೈಸಿ, ಈ ಹಿಂದೆ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆದಂತೆಯೇ ಈ ಪ್ರತಿಭಟನೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾನೂನನ್ನು ಹಿಂಪಡೆಯಬೇಕು. ನಮ್ಮ ರೈತ ಸಹೋದರರು ತೋರಿಸಿದ ಅದೇ ರೀತಿಯಲ್ಲಿ ನಾವು ಚಳವಳಿ ಮುಂದುವರಿಸುತ್ತೇವೆ. ಕಾನೂನನ್ನು ಹಿಂಪಡೆಯುವವರೆಗೆ ದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.
ಅವರು ಜನಸಮೂಹವನ್ನು ಉದ್ದೇಶಿಸಿ, ನೀವು ದೀರ್ಘಾವಧಿಯ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಿದ್ಧರಿದ್ದೀರಾ? ನೀವು ಸಿದ್ಧರಿದ್ದರೆ, ಈ ಕರಾಳ ಕಾನೂನನ್ನು ಹಿಂತೆಗೆದುಕೊಳ್ಳುವವರೆಗೆ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ನಿಮಗೆ ನೀವೇ ಪ್ರತಿಜ್ಞೆ ಮಾಡಿಕೊಳ್ಳಿ ಎಂದು ಹೇಳಿದರು.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತ್ರಿವಳಿ ತಲಾಖ್ ಕಾನೂನು, ಸಿಎಎ ಮತ್ತು ಧಾರ್ಮಿಕ ಮತಾಂತರ ಕಾನೂನುಗಳನ್ನು ಜಾರಿಗೆ ತಂದ ಬಗ್ಗೆ ಉಲ್ಲೇಖಿಸಿದ ಉವೈಸಿ, ಪ್ರಧಾನಿ ಮೋದಿ ಕಳೆದ 11 ವರ್ಷಗಳಿಂದ ಮುಸ್ಲಿಮರ ಧಾರ್ಮಿಕ ಗುರುತಿನ ಮೇಲೆ ದಾಳಿ ಮಾಡುತ್ತಿದ್ದಾರೆ. ಈಗ ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಮೋದಿ ನಮ್ಮ ಶರೀಅತ್ ಅನ್ನು ನಮ್ಮಿಂದ ಕಸಿದುಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಬಗ್ಗೆ ದುಬೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಉವೈಸಿ, ಅಯೋಧ್ಯೆ ಮತ್ತು ಇತರ ಪ್ರಕರಣಗಳಲ್ಲಿನ ತೀರ್ಪುಗಳು ಮುಸ್ಲಿಮರ ವಿರುದ್ಧ ಬಂದಾಗ, ನಾವು ಉದ್ಧಟತನ ತೋರಿಲ್ಲ. ನಮ್ಮ ವಿರುದ್ಧ ತೀರ್ಪು ಬಂದಾಗ ನಾವು ಅದನ್ನು ಸ್ವೀಕರಿಸುತ್ತೇವೆ. ನಾವು ಸಾಂವಿಧಾನವನ್ನು ನಂಬುತ್ತೇವೆ ಆದ್ದರಿಂದ ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವೀಕರಿಸುತ್ತೇವೆ. ಆದರೆ, ಈ ಸಂಘ ಪರಿವಾರದ ಜನರು ಸಂವಿಧಾನ ವಿರೋಧಿಗಳು. ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎಂದು ಉವೈಸಿ ಹೇಳಿದರು.