×
Ad

"ಸಮರ್ಪಕ ತನಿಖೆ ನಡೆದಿಲ್ಲ": ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಕುರಿತು ಅಸದುದ್ದೀನ್ ಉವೈಸಿ ಪ್ರತಿಕ್ರಿಯೆ

Update: 2025-07-31 16:39 IST

ಅಸದುದ್ದೀನ್ ಉವೈಸಿ | PTI 

ಹೊಸದಿಲ್ಲಿ: 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿನ ಎಲ್ಲ ಆರೋಪಿಗಳನ್ನೂ ನ್ಯಾಯಾಲಯ ಖುಲಾಸೆಗೊಳಿಸಿರುವ ತೀರ್ಪಿನ ಕುರಿತು ಗುರುವಾರ ಅಸಮಾಧಾನ ವ್ಯಕ್ತಪಡಿಸಿದ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ, “ಈ ತೀರ್ಪು ಅಸಮರ್ಪಕ ತನಿಖೆಯ ಫಲಿತಾಂಶವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹೈದರಾಬಾದ್ ಸಂಸದರೂ ಆದ ಅಸದುದ್ದೀನ್ ಉವೈಸಿ, “ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಅಸಮಾಧಾನವನ್ನುಂಟು ಮಾಡಿದೆ. ಈ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು ಹಾಗೂ ಸುಮಾರು 100 ಮಂದಿ ಗಾಯಗೊಂಡಿದ್ದರು. ಅವರನ್ನೆಲ್ಲ ಅವರ ಧರ್ಮಕ್ಕಾಗಿ ಗುರಿಯಾಗಿಸಿಕೊಳ್ಳಲಾಗಿತ್ತು. ಉದ್ದೇಶಪೂರ್ವಕವಾಗಿ ಅಸಮರ್ಪಕ ತನಿಖೆ ಮಾಡಲಾಗಿದ್ದು, ಪ್ರಾಸಿಕ್ಯೂಷನ್ ಈ ಖುಲಾಸೆಗೆ ಹೊಣೆಯಾಗಿದೆ” ಎಂದು ಆರೋಪಿಸಿದ್ದಾರೆ.

ಎನ್ಐಎ ನ್ಯಾಯಾಲಯದ ತೀರ್ಪನ್ನು ಕೇಂದ್ರ ಸರಕಾರ ಹಾಗೂ ಮಹಾರಾಷ್ಟ್ರ ಸರಕಾರ ಪ್ರಶ್ನಿಸುತ್ತಾ? ಸ್ಫೋಟ ಸಂಭವಿಸಿದ ಹದಿನೇಳು ವರ್ಷಗಳ ನಂತರ, ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲ ಆರೋಪಿಗಳನ್ನೂ ನ್ಯಾಯಾಲಯ ಖುಲಾಸೆಗೊಳಿಸಿದೆ. ಮುಂಬೈ ರೈಲು ಸ್ಫೋಟ ಪ್ರಕರಣದ ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸಿ ತ್ವರಿತವಾಗಿ ಮೇಲ್ಮನವಿ ಸಲ್ಲಿಸಿದಂತೆ, ಈ ತೀರ್ಪಿನ ವಿಚಾರದಲ್ಲೂ ಮೋದಿ ಹಾಗೂ ಫಡ್ನವಿಸ್ ಸರಕಾರಗಳು ಮೇಲ್ಮನವಿ ಸಲ್ಲಿಸುತ್ತಾ? ಮಹಾರಾಷ್ಟ್ರದ ಜಾತ್ಯತೀತ ಪಕ್ಷಗಳು ಈ ಕುರಿತು ಉತ್ತರದಾಯಿತ್ವವನ್ನು ಆಗ್ರಹಿಸುತ್ತಾ? ಆರು ಮಂದಿಯನ್ನು ಹತ್ಯೆಗೈದಿದ್ಯಾರು?” ಎಂದು ಅವರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಆರೋಪಿಗಳ ಬಗ್ಗೆ ʼಮೃದುʼವಾಗಿರುವಂತೆ ನನಗೆ ಸೂಚಿಸಲಾಗಿತ್ತು ಎಂದು ಮಾಜಿ ಸಾರ್ವಜನಿಕ ಅಭಿಯೋಜಕಿ ರೋಹಿಣಿ ಸಾಲಿಯಾನ್ ರ ಆರೋಪವನ್ನೂ ಅವರು ನೆನಪಿಸಿದ್ದಾರೆ. “2016ರಲ್ಲಿ ಈ ಪ್ರಕರಣದ ಸಾರ್ವಜನಿಕ ಅಭಿಯೋಜಕಿಯಾಗಿದ್ದ ರೋಹಿಣಿ ಸಾಲಿಯಾನ್ ಅವರು, “ಆರೋಪಿಗಳ ಬಗ್ಗೆ ʼಮೃದುʼವಾಗಿ ವರ್ತಿಸುವಂತೆ ರಾಷ್ಟ್ರೀಯ ತನಿಖಾ ದಳ ನನಗೆ ಸೂಚಿಸಿತ್ತು” ಎಂದು ಆರೋಪಿಸಿದ್ದದ್ದನ್ನು ನೆನಪಿಸಿಕೊಳ್ಳಿ. 2017ರಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಖುಲಾಸೆಗೊಳಿಸಲು ರಾಷ್ಟ್ರೀಯ ತನಿಖಾ ತಂಡ ಪ್ರಯತ್ನ ಮಾಡಿದ್ದನ್ನು ನೆನಪಿಸಿಕೊಳ್ಳಿ. ಇದೇ ವ್ಯಕ್ತಿ 2019ರಲ್ಲಿ ಬಿಜೆಪಿಯ ಸಂಸದರಾಗಿ ಆಯ್ಕೆಯಾಗಿದ್ದರು” ಎಂದು ಗಮನ ಸೆಳೆದಿದ್ದಾರೆ.

ಈ ಪ್ರಕರಣದ ಆರಂಭಿಕ ತನಿಖೆ ನಡೆಸಿದ್ದ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನೂ ಅಸದುದ್ದೀನ್ ಉವೈಸಿ ಉಲ್ಲೇಖಿಸಿದ್ದಾರೆ. “ಮಾಲೇಗಾಂವ್ ಬಾಂಬ್ ಸ್ಫೋಟದ ಪಿತೂರಿಯನ್ನು ಕರ್ಕರೆ ಬಯಲು ಮಾಡಿದ್ದರು. ಆದರೆ, ದುರದೃಷ್ಟವಶಾತ್ ಅವರು ಪಾಕಿಸ್ತಾನಿ ಭಯೋತ್ಪಾದಕರ 26/11 ದಾಳಿಯಲ್ಲಿ ಹತರಾದರು. ನಾನು ಅವರಿಗೆ ಸಾವು ಬರಲಿ ಎಂದು ಶಪಿಸಿದ್ದೆ ಹಾಗೂ ನನ್ನ ಶಾಪದ ಪರಿಣಾಮವಾಗಿ ಅವರು ಮೃತಪಟ್ಟರು ಎಂದು ಬಿಜೆಪಿ ಸಂಸದೆಯಾಗಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ನೀಡಿದ್ದದ್ದು ವರದಿಯಾಗಿತ್ತು” ಎಂದೂ ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News