ಮೂರು ದಿನಗಳ ಭಾರತ ಪ್ರವಾಸ ಅಂತ್ಯಗೊಳಿಸಿದ ಲಿಯೊನೆಲ್ Messi
ಪ್ರತಿಕೂಲ ಹವಾಮಾನದಿಂದಾಗಿ ತಡವಾಗಿ ದಿಲ್ಲಿ ತಲುಪಿದ ಅರ್ಜೆಂಟೀನದ ಆಟಗಾರ
credit : AFP
ಹೊಸದಿಲ್ಲಿ, ಡಿ.15: ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಅರ್ಜೆಂಟೀನದ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಸೋಮವಾರ ಬಿಗಿಭದ್ರತೆಯ ನಡುವೆ ರಾಷ್ಟ್ರ ರಾಜಧಾನಿಗೆ ಆಗಮಿಸಿದರು. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮೆಸ್ಸಿ ಪ್ರಯಾಣಿಸುತ್ತಿದ್ದ ವಿಮಾನವು ವಿಳಂಬವಾಗಿ ಮುಂಬೈನಿಂದ ದಿಲ್ಲಿಗೆ ಆಗಮಿಸಿತು.
ಬೆಳಗ್ಗೆ ಆಗಮಿಸಬೇಕಾಗಿದ್ದ ವಿಶ್ವಕಪ್ ವಿಜೇತ ನಾಯಕ ಮೆಸ್ಸಿ ಅವರು ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2:30ಕ್ಕೆ ತಲುಪಿದರು. ಅಲ್ಲಿಂದ ನೇರವಾಗಿ ಲೀಲಾ ಪ್ಯಾಲೇಸ್ ಹೊಟೇಲ್‌ಗೆ ತೆರಳಿ ಕೆಲವು ಆಯ್ದ ಅತಿಥಿಗಳನ್ನು ಭೇಟಿಯಾದರು.
ರವಿವಾರ ಮುಂಬೈಗೆ ತೆರಳಿದ್ದ ಮೆಸ್ಸಿ ಅವರು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಹಲವು ಬಾಲಿವುಡ್ ತಾರೆಯರು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹಿತ ಇತರ ರಾಜಕಾರಣಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಮುಂಬೈಗಿಂತ ಮೊದಲು ಮೆಸ್ಸಿ ಅವರು ಹೈದರಾಬಾದ್ ಹಾಗೂ ಕೋಲ್ಕತ್ತಾಕ್ಕೆ ತೆರಳಿದ್ದರು.
ಸೋಮವಾರ ಸಂಜೆ ಅರುಣ್ ಜೇಟ್ಲಿ ಸ್ಟೇಡಿಯಂಗೆ ಆಗಮಿಸಿದ ಮೆಸ್ಸಿ ಅವರಿಗೆ ಅರ್ಜೆಂಟೀನದ ಆಟಗಾರ ರೊಡ್ರಿಗೊ ಡಿ ಪೌಲ್ ಹಾಗೂ ಉರುಗ್ವೆ ಆಟಗಾರ ಲುಯಿಸ್ ಸುಯರೆಝ್ ಸಾಥ್ ನೀಡಿದರು. ಫುಟ್ಬಾಲ್ ಲೆಜೆಂಡ್ ಮೆಸ್ಸಿ ಅವರನ್ನು ಮೈದಾನದಲ್ಲಿ ಆಟಗಾರರು ಸ್ವಾಗತಿಸಿದರು. ಮೆಸ್ಸಿ ಅವರು ಮಕ್ಕಳೊಂದಿಗೆ ಫುಟ್ಬಾಲ್ ಆಡಿದರು. ಜೆರ್ಸಿಗಳಿಗೆ ತನ್ನ ಸಹಿ ಹಾಕಿದರು. ಸ್ಟೇಡಿಯಂನಲ್ಲಿ ನೆರೆದಿದ್ದ ಫುಟ್ಬಾಲ್ ಅಭಿಮಾನಿಗಳು ಧ್ವಜಗಳನ್ನು ಬೀಸುತ್ತಾ ಸಂಭ್ರಮ ವ್ಯಕ್ತಪಡಿಸಿದರು. ತಮ್ಮ ಮೊಬೈಲ್‌ನಲ್ಲಿ ಸ್ಮರಣೀಯ ಕ್ಷಣವನ್ನು ಸೆರೆ ಹಿಡಿದರು. ಮೆಸ್ಸಿ, ರೊಡ್ರಿಗೊ ಡಿ ಪೌಲ್ ಹಾಗೂ ಸುಯರೆಝ್ ಕಿಕ್ಕಿರಿದು ತುಂಬಿದ್ದ ಅರುಣ್ ಜೇಟ್ಲಿ ಸ್ಟೇಡಿಯಂ ಸುತ್ತಲೂ ನಡೆದಾಡಿದರು.
ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಐಸಿಸಿ ಚೇರ‌್ಮನ್ ಜಯ್ ಶಾ ಅವರು ಮೆಸ್ಸಿ ಅವರನ್ನು ಭೇಟಿಯಾಗಲು ಸ್ಟೇಡಿಯಂಗೆ ಆಗಮಿಸಿದರು.
ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಅವರು ಮೆಸ್ಸಿ, ಸುಯರೆಝ್ ಹಾಗೂ ರೊಡ್ರಿಗೊರನ್ನು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭೇಟಿಯಾದರು.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಫುಟ್ಬಾಲ್ ಅಭಿಮಾನಿಗಳನ್ನು ಉಲ್ಲೇಖಿಸಿ ಮೆಸ್ಸಿ ಅವರು ಸ್ಪ್ಯಾನಿಶ್ ಭಾಷೆಯಲ್ಲಿ ಮಾತನಾಡಿದರು.