ಆಪರೇಷನ್ ಸಿಂಧೂರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ: ಅಶೋಕ ವಿವಿ ಸಹಾಯಕ ಪ್ರಾಧ್ಯಾಪಕ ಪ್ರೊ.ಅಲಿ ಖಾನ್ ಬಂಧನ
ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ (credit: ashoka.edu.in)
ಹೊಸದಿಲ್ಲಿ : ಆಪರೇಷನ್ ಸಿಂಧೂರ ಕಾರ್ಯಚರಣೆ ಕುರಿತ ಪತ್ರಿಕಾಗೋಷ್ಠಿ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಬಂಧಿಸಲಾಗಿದೆ ಎಂದು scroll.in ವರದಿ ಮಾಡಿದೆ.
ಹರ್ಯಾಣದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಜಥೇರಿ ನೀಡಿದ ದೂರಿನ ಮೇರೆಗೆ ಸೋನೆಪತ್ ಜಿಲ್ಲೆಯ ರಾಯ್ ಪೊಲೀಸ್ ಠಾಣೆಯಲ್ಲಿ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರೊಫೆಸರ್ ಅಲಿ ಖಾನ್ ಮಹಿಳಾ ಅಧಿಕಾರಿಗಳು ನಡೆಸಿದ 'ಆಪರೇಷನ್ ಸಿಂಧೂರ್' ಕುರಿತ ಮಾಧ್ಯಮ ಸಂವಾದವನ್ನು ಟೀಕಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಪತ್ರಿಕಾಗೋಷ್ಠಿಯನ್ನು ಅವರು ʼದೃಗ್ವಿಜ್ಞಾನʼ ಎಂದು ಬಣ್ಣಿಸಿದ್ದಾರೆ. ʼದೃಗ್ವಿಜ್ಞಾನʼ ನೆಲದ ಮೇಲೆ ವಾಸ್ತವಕ್ಕೆ ಭಾಷಾಂತರಿಸಲ್ಪಡಬೇಕು ಇಲ್ಲದಿದ್ದರೆ ಅದು ಕೇವಲ ಬೂಟಾಟಿಕೆ ಎಂದು ಹೇಳಿದ್ದರು ಎಂದು ವರದಿಯಾಗಿದೆ.
ಹಲವು ಬಲಪಂಥೀಯರು ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಶ್ಲಾಘಿಸುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ. ಬಹುಶಃ ಅವರು ಗುಂಪು ಹತ್ಯೆಗಳು, ಅನಿಯಂತ್ರಿತ ಬುಲ್ಡೋಝರ್ ಕಾರ್ಯಾಚರಣೆ ಮತ್ತು ಬಿಜೆಪಿಯ ದ್ವೇಷ ಪ್ರಚಾರಕ್ಕೆ ಬಲಿಯಾದ ಇತರರನ್ನು ಭಾರತೀಯ ನಾಗರಿಕರಾಗಿ ರಕ್ಷಿಸಬೇಕೆಂದು ಒತ್ತಾಯಿಸಬಹುದುʼ ಎಂದು ಕೂಡ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಹರ್ಯಾಣ ರಾಜ್ಯ ಮಹಿಳಾ ಆಯೋಗ ಪ್ರೊಫೆಸರ್ ಅಲಿ ಖಾನ್ ಗೆ ಸಮನ್ಸ್ ಜಾರಿ ಮಾಡಿತ್ತು. ಮಾಧ್ಯಮ ಸಂವಾದಗಳ ಕುರಿತಾದ ಹೇಳಿಕೆಗಳು ಭಾರತೀಯ ಸೇನಾ ಮಹಿಳಾ ಅಧಿಕಾರಿಗೆ ಅವಹೇಳನ ಮಾಡುತ್ತದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಹೇಳಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿದ್ದ ಪ್ರೊಫೆಸರ್ ಅಲಿ ಖಾನ್, ಮಹಿಳಾ ಆಯೋಗವು ನನ್ನ ಪೋಸ್ಟ್‌ಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಮತ್ತು ಅವುಗಳ ಅರ್ಥವನ್ನು ತಲೆಕೆಳಗಾಗಿಸಿದೆ. ಇದರಿಂದ ನನಗೆ ಆಶ್ಚರ್ಯವಾಗಿದೆ ಎಂದು ಹೇಳಿದ್ದರು.
ದಿಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದ್ ಈ ಕುರಿತು ಪ್ರತಿಕ್ರಿಯಿಸಿ, ಹರ್ಯಾಣ ಪೊಲೀಸರು ಡಾ. ಅಲಿ ಖಾನ್ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ಟ್ರಾನ್ಸಿಟ್ ರಿಮಾಂಡ್ ಇಲ್ಲದೆ ಅವರನ್ನು ದಿಲ್ಲಿಯಿಂದ ಹರ್ಯಾಣಕ್ಕೆ ಕರೆದೊಯ್ಯಲಾಗಿದೆ. ಅವರ ವಿರುದ್ಧ ರಾತ್ರಿ 8 ಗಂಟೆಗೆ ಎಫ್ಐಆರ್ ದಾಖಲಿಸಲಾಗಿದೆ. ಮರುದಿನ ಬೆಳಿಗ್ಗೆ 7ಗಂಟೆಗೆ ಪೊಲೀಸರು ಅವರ ಮನೆಗೆ ತಲುಪಿದರು. ಈ ಬಗ್ಗೆ ದಿಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು. ದಯವಿಟ್ಟು ಪ್ರಬೀರ್ ಪುರ್ಕಾಯಸ್ಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನೋಡಿ ಎಂದು ಹೇಳಿದರು.