×
Ad

ʼಆಪರೇಶನ್‌ ಸಿಂಧೂರ್‌ʼ ಕುರಿತು ಪೋಸ್ಟ್:‌ ಅಶೋಕ ವಿವಿಯ ಪ್ರಾಧ್ಯಾಪಕರಿಗೆ 14 ದಿನಗಳ ನ್ಯಾಯಾಂಗ ಬಂಧನ

Update: 2025-05-20 17:47 IST

ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ (credit: ashoka.edu.in)

ಹೊಸದಿಲ್ಲಿ: ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದಲ್ಲಿ ಭಾರತದ ಮಿಲಿಟರಿ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ ಗೆ ಸಂಬಂಧಿಸಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮಹಮ್ಮದಾಬಾದ್‌ ಅವರನ್ನು ಏಳು ದಿನಗಳ ಕಾಲ ವಶಕ್ಕೆ ನೀಡುವಂತೆ ಹರಿಯಾಣ ಪೊಲೀಸರು ಕೋರಿದರಾದರೂ, ಸೋನೆಪತ್ ನ್ಯಾಯಾಲಯವು ಪ್ರಾಧ್ಯಾಪಕರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಅಶೋಕ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಅಲಿ ಖಾನ್ ಅವರನ್ನು ರವಿವಾರ ಬಂಧಿಸಲಾಗಿತ್ತು.

ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಸಶಸ್ತ್ರ ಪಡೆಗಳನ್ನು ಟೀಕಿಸಿದ್ದಾರೆ ಮತ್ತು ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮ ಸಭೆಗಳನ್ನು ನಡೆಸಿದ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರಿಗೆ ಅಗೌರವ ತೋರಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಅವರ ವಿರುದ್ಧ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಪ್ರಾಧ್ಯಾಪಕರ ವಿರುದ್ಧ ಹರ್ಯಾಣದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಜಥೇರಿ ಅವರು ನೀಡಿದ ದೂರಿನ ನಂತರ ಕಾನೂನು ಪ್ರಕ್ರಿಯೆ ನಡೆದಿದೆ. ಹರಿಯಾಣ ರಾಜ್ಯ ಮಹಿಳಾ ಆಯೋಗವು ಕೂಡಾ ಈ ಬಗ್ಗೆ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದೆ.

ಆದಾಗ್ಯೂ, ಪ್ರಾಧ್ಯಾಪಕರು ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಮತ್ತು ತಾನು ತನ್ನ ಸಾಂವಿಧಾನಿಕ ಹಕ್ಕಾದ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

“ಕರ್ನಲ್ ಖುರೇಷಿಯನ್ನು ಶ್ಲಾಘಿಸುತ್ತಿರುವ ಬಲಪಂಥೀಯರು, ಗುಂಪು ಹತ್ಯೆಯ ಬಲಿಪಶುಗಳು ಮತ್ತು ಬುಲ್ಡೋಝರ್‌ ಮೂಲಕ ಮನೆ ಕಳೆದುಕೊಂಡವರ ಪರವಾಗಿಯೂ ವಕಾಲತ್ತು ವಹಿಸಬೇಕು” ಎಂದು ಅಲಿ ಖಾನ್ ಅವರು ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ತಮ್ಮ ಬಂಧನದ ವಿರುದ್ಧ ಪ್ರಾಧ್ಯಾಪಕರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಬುಧವಾರ ಈ ವಿಷಯವನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಅಶೋಕ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘವು ಅಲಿ ಖಾನ್ ಅವರ ಬಂಧನದ ವಿರುದ್ಧ ದನಿಯೆತ್ತಿದ್ದು, ಅಲಿ ಖಾನ್ ಅವರನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಅಲಿ ಖಾನ್ ಅವರನ್ನು ಕೋಮು ಸಾಮರಸ್ಯ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ನಿರಂತರವಾಗಿ ಕೆಲಸ ಮಾಡಿದ "ಸಮರ್ಪಣಾಭಾವದ ಶಿಕ್ಷಣತಜ್ಞ" ಎಂದು ಕರೆದಿರುವ ಸಂಘವು, ಅಶೋಕ (ವಿವಿ) ಸಮುದಾಯದ ಪ್ರತಿಯೊಬ್ಬರೂ ಅವರ ಸಮಗ್ರತೆ, ಸಹಾನುಭೂತಿ ಮತ್ತು ಇತರರಿಗೆ ಶಿಕ್ಷಣ ನೀಡಲು ಅವರು ಪಟ್ಟಿರುವ ಪ್ರಯತ್ನದ ಕಡೆಗೆ ಗಮನ ಸೆಳೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News