ರಾಜ್ಯಸಭೆಗೆ ಒಡಿಶಾದಿಂದ ಅಶ್ವಿನಿ ವೈಷ್ಣವ್ ; ಇಬ್ಬರು ಬಿಜೆಡಿ ನಾಯಕರು ಅವಿರೋಧವಾಗಿ ಆಯ್ಕೆ
ಹೊಸದಿಲ್ಲಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಬಿಜೆಡಿಯ ದೇಬಾಶೀಶ ಸಾಮಂತ್ರೆ, ಶುಭಾಶಿಶ್ ಕುಂಟಿಯಾ ಅವರು ಒಡಿಶಾದಿಂದ ರಾಜ್ಯ ಸಭೆಗೆ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಅಪರಾಹ್ನ ಅಂತ್ಯಗೊಂಡ ನಾಮಪತ್ರ ಹಿಂಪಡೆಯುವ ಗಡುವಿನ ಬಳಿಕ ಚುನಾವಣಾಧಿಕಾರಿ ರಾಜೇಶ್ ಅಬನಿಕಂಟ ಪಟ್ನಾಯಕ್ ಅವರು ಚುನಾಯಿತರ ಹೆಸರುಗಳನ್ನು ಪ್ರಕಟಿಸಿದರು.
ಬಿಜೆಪಿ ಅಭ್ಯರ್ಥಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಆಡಳಿತಾರೂಢ ಬಿಜೆಡಿಯ ಬೆಂಬಲದಿಂದ ರಾಜ್ಯ ಸಭೆಗೆ ಮರು ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಫೆಬ್ರವರಿ 15ರಂದು ಅಶ್ವಿನಿ ವೈಷ್ಣವ್ ಅವರು ನಾಮಪತ್ರ ಸಲ್ಲಿಸಿದ್ದರು. ಬಿಜೆಡಿಯ ಇಬ್ಬರು ಅಭ್ಯರ್ಥಿಗಳು ಫೆಬ್ರವರಿ 13ರಂದು ನಾಮಪತ್ರ ಸಲ್ಲಿಸಿದ್ದರು.
ಈ ವರ್ಷ ಎಪ್ರಿಲ್ ನಲ್ಲಿ ತೆರವಾಗುವ ಎಲ್ಲಾ 3 ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲು ಒಡಿಶಾ ವಿಧಾನ ಸಭೆಯಲ್ಲಿ ಅಗತ್ಯವಿರುವ ಸಂಖ್ಯೆಯನ್ನು ಬಿಜೆಡಿ ಹೊಂದಿದ್ದರೂ ಆಡಳಿತ ಪಕ್ಷವಾದ ಬಿಜೆಡಿ ಬಿಜೆಪಿಯ ವೈಷ್ಣವ್ ಗೆ ಒಂದು ಸ್ಥಾನವನ್ನು ಬಿಟ್ಟು ಕೊಟ್ಟು ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಆದ್ಯತೆ ನೀಡಿತ್ತು.