ಸೆರೆ ಹಿಡಿದ 21 ಆನೆಗಳು ರಿಲಯನ್ಸ್ ಒಡೆತನದ ವಂತಾರಾಗೆ ಸಾಗಾಟ: ಅಸ್ಸಾಂ ಪ್ರಾಣಿ ಹಕ್ಕುಗಳ ಹೋರಾಟಗಾರರ ವಿರೋಧ
Credit: Special Arrangement \ deccanherald.com
ಗುವಾಹಟಿ: ಅರುಣಾಚಲ ಪ್ರದೇಶದಿಂದ ಅಸ್ಸಾಂ ಮೂಲಕ ಗುಜರಾತ್ ನ ರಿಲಯನ್ಸ್ ಒಡೆತನದ ವಂತಾರಾ ಪ್ರಾಣಿ ಸಂರಕ್ಷಣೆ ಹಾಗೂ ಆರೈಕೆ ಕೇಂದ್ರಕ್ಕೆ ಕನಿಷ್ಠ 21 ಆನೆಗಳನ್ನು ಪ್ರಾಣಿ ಆ್ಯಂಬುಲೆನ್ಸ್ ಗಳ ಮೂಲಕ ಸಾಗಾಟ ಮಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಪ್ರಾಣಿ ಹಕ್ಕುಗಳ ಹೋರಾಟಗಾರರು ಹಾಗೂ ವಿರೋಧ ಪಕ್ಷಗಳು ಧ್ವನಿಯೆತ್ತಿವೆ.
ಸುದ್ದಿವಾಹಿನಿಗಳು ಆನೆಗಳ ವೀಡಿಯೊ ತುಣುಕುಗಳನ್ನು ಪ್ರಸಾರ ಮಾಡಿದ್ದು, ಈ ವೀಡಿಯೊ ತುಣುಕುಗಳಲ್ಲಿ ಆನೆಗಳು ಬೋನಿನಿಂದ ಹೊರಕ್ಕೆ ತಮ್ಮ ಸೊಂಡಿಲು ಚಾಚುತ್ತಿರುವುದನ್ನು ಕಾಣಬಹುದಾಗಿದೆ. ಈ ಕುರಿತು ರವಿವಾರ ಮತ್ತು ಸೋಮವಾರ ಪ್ರಾಣಿ ಹಕ್ಕುಗಳ ಹೋರಾಟಗಾರರು ಧ್ವನಿ ಎತ್ತಿದ್ದು, ಈ ಆನೆಗಳನ್ನು ಸುಮಾರು 3,500 ಕಿಮೀ ದೂರ ಏಕೆ ಸಾಗಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಹಲವಾರು ಮಂದಿ ಈ ಆನೆಗಳು ಅಸ್ಸಾಂನವೇ ಎಂದು ಶಂಕಿಸಿದ್ದರು. ಆದರೆ, ಈ ಕುರಿತು ಸ್ಪಷ್ಟೀಕರಣ ನೀಡಿರುವ ಅಧಿಕಾರಿಗಳು, ಸೆರೆ ಹಿಡಿಯಲಾಗಿರುವ ಆನೆಗಳನ್ನು ಅರುಣಾಚಲ ಪ್ರದೇಶದ ನಮಸಾಯಿಯಿಂದ ಗುಜರಾತ್ ನ ಜಾಮ್ ನಗರದಲ್ಲಿರುವ ರಿಲಯನ್ಸ್ ಸಮೂಹ ಒಡೆತನದ ವಂತಾರಾ ಪ್ರಾಣಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಕೇಂದ್ರವು ರಾಧೇಕೃಷ್ಣ ದೇವಸ್ಥಾನ ಆನೆ ಕಲ್ಯಾಣ ಟ್ರಸ್ಟ್ ಅಡಿ ಇದ್ದು, ಈ ಟ್ರಸ್ಟ್ ಅನ್ನು ರಿಲಯನ್ಸ್ ಸಮೂಹದ ಅನಂತ್ ಅಂಬಾನಿ ನೋಡಿಕೊಳ್ಳುತ್ತಿದ್ದಾರೆ.
ಆನೆಗಳನ್ನು ಗುಜರಾತ್ ಗೆ ಸಾಗಾಟ ಮಾಡಲು ಅವಕಾಶ ನೀಡಿರುವ ಬಿಜೆಪಿ ನೇತೃತ್ವದ ಅಸ್ಸಾಂ ಸರಕಾರವನ್ನು ವಿರೋಧ ಪಕ್ಷವಾದ ರಾಯ್ಜೋರ್ ದಳದ ಅಸ್ಸಾಂ ಶಾಸಕ ಅಖಿಲ್ ಗೊಗೊಯಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಒಂದೇ ಒಂದು ಪ್ರಾಣಿಯನ್ನೂ ಈ ಪ್ರಾಂತ್ಯದಿಂದ ಹೊರಗಡೆ ಕೊಂಡೊಯ್ಯಬಾರದು. ಸರಕಾರವು ಆ ಎಲ್ಲ ಪ್ರಾಣಿಗಳನ್ನು ಮರಳಿ ಕರೆ ತರಬೇಕು ಹಾಗೂ ಅವುಗಳ ಕಲ್ಯಾಣದ ಹೊಣೆಗಾರಿಕೆಯನ್ನು ಹೊರಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಈ ನಡುವೆ, ಅಸ್ಸಾಂ ಸರಕಾರ ಒದಗಿಸಿರುವ ಪತ್ರದ ಪ್ರಕಾರ, “ಬೆಂಗಾವಲು ಪಡೆಯು ಜನವರಿ 18ರಂದು ಅರುಣಾಚಲ ಪ್ರದೇಶದ ನಮಸಾಯಿ ಜಿಲ್ಲೆಯಿಂದ ತನ್ನ ಪಯಣ ಪ್ರಾರಂಭಿಸಿದ್ದು, ಇನ್ನು ಏಳರಿಂದ ಎಂಟು ದಿನಗಳೊಳಗೆ ಅಸ್ಸಾಂ, ಬಂಗಾಳ, ಬಿಹಾರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಮಾರ್ಗವಾಗಿ ಜಾಮ್ ನಗರ ತಲುಪುವ ಸಾಧ್ಯತೆ ಇದೆ” ಎಂದು ಹೇಳಲಾಗಿದೆ.
ಸೋಮವಾರ ಸಂಜೆ ವಂತಾರಾ ಕೂಡಾ ಹೇಳಿಕೆ ಬಿಡುಗಡೆ ಮಾಡಿದ್ದು, 20 ಆನೆಗಳನ್ನು (10 ಪುರುಷ, 8 ಮಹಿಳೆ ಒಂದು ಅಪ್ರಾಪ್ತ ಹಾಗೂ ಒಂದು ಮರಿ ಆನೆ) ಅರುಣಾಚಲ ಪ್ರದೇಶದ ಲಾಭಕೋರ ಕಳ್ಳ ಸಾಗಣೆ ಉದ್ಯಮದಿಂದ ಸ್ವತಂತ್ರಗೊಳಿಸಲಾಗಿದೆ ಎಂದು ಹೇಳಿದೆ.