ಅಸ್ಸಾಂ | ಪೊಲೀಸರ ಜೊತೆ ಗುಂಡಿನ ಚಕಮಕಿ : ನಾಲ್ವರು ದರೋಡೆಕಾರರ ಹತ್ಯೆ
ಸಾಂದರ್ಭಿಕ ಚಿತ್ರ | PTI
ಗೋಲಪಾರ, ಸೆ. 28: ಅಸ್ಸಾಂನ ಗೋಲಪಾರ ಜಿಲ್ಲೆಯಲ್ಲೆ ರವಿವಾರ ಪೊಲೀಸರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ದರೋಡೆಕೋರರು ಹತರಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಪಹರಣ ಯತ್ನದ ಸಾಧ್ಯತೆ ಕುರಿತ ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ಜಿಲ್ಲೆಯ ಘಿಲಾದುಬಿ ಪ್ರದೇಶದಲ್ಲಿ ತಪಾಸಣೆ ಏರ್ಪಡಿಸಿದ್ದರು.
‘‘ಈ ತಪಾಸಣೆ ಸಂದರ್ಭ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದರೋಡೆಕೋರರ ಗುಂಪೊಂದು ಪೊಲೀಸರಿಗೆ ಮುಖಾಮುಖಿಯಾಯಿತು. ದರೋಡೆಕೋರರು ಪೊಲೀಸರ ಮೇಲೆ ಗುಂಡು ಹಾರಿಸಿದರು. ಪೊಲೀಸರು ಪ್ರತಿ ದಾಳಿ ನಡೆಸಿದರು. ಇದರಿಂದ ನಾಲ್ಕು ಮಂದಿ ದರೋಡೆಕೋರರು ಗಾಯಗೊಂಡರು’’ ಎಂದು ಗೋಪಾಲಪಾರದ ಹಿರಿಯ ಪೊಲೀಸ್ ವರಿಷ್ಠ ನವನೀತ್ ಮಹಾಂತ ತಿಳಿಸಿದ್ದಾರೆ.
ಗಾಯಗೊಂಡ ನಾಲ್ವರು ದರೋಡೆಕೋರರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ಹೇಳಿದ್ದಾರೆ.
ಕಾರಿನಿಂದ ದರೋಡೆಕೋರರು ಬಳಸುತ್ತಿದ್ದ 4 ಪಿಸ್ತೂಲ್, 5 ಮೊಬೈಲ್, 2 ವಾಕಿ-ಟಾಕಿ ಸೆಟ್‌ಗಳು ಹಾಗೂ ಕಾಟ್ರಿಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.