ಅಸ್ಸಾಂನಲ್ಲಿ ಮುಸ್ಲಿಂ ವಿವಾಹ, ವಿಚ್ಛೇದನ ಕಡ್ಡಾಯ ನೋಂದಣಿಗೆ ಕಾನೂನು
ಸಾಂದರ್ಭಿಕ ಚಿತ್ರ (PTI)
ಗುವಾಹತಿ: ಮುಸ್ಲಿಂ ವಿವಾಹ ಹಾಗೂ ವಿಚ್ಛೇದನವನ್ನು ಸರ್ಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡುವ ಸಂಬಂಧ ತರಲು ಉದ್ದೇಶಿಸಿರುವ ಮಸೂದೆಗೆ ಅಸ್ಸಾಂ ಸಚಿವ ಸಂಪುಟ ಒಪ್ಪಿಗದೆ ನೀಡಿದೆ. ಈ ಕಾಯ್ದೆ ಜಾರಿಯಾದ ಬಳಿಕ ಮುಸ್ಲಿಂ ವಿವಾಹ ಮತ್ತು ವಿಚ್ಛೇದವನ್ನು ನೋಂದಾಯಿಸಿಕೊಳ್ಳುವ ಖಾಝಿಗಳ ಪಾತ್ರ ರದ್ದಾಗಲಿದೆ.
ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳ ಮಸೂದೆ-2024ನ್ನು ಗುರುವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.
"ಇಂದು ಅಸ್ಸಾಂ ಸಂಪುಟವು ಮುಸ್ಲಿಂ ವಿವಾಹ ನೋಂದಣಿ ಮಸೂದೆ-2024ಕ್ಕೆ ಅನುಮೋದನೆ ನೀಡಿದೆ. ಇದು ಎರಡು ವಿಶೇಷ ನಿಬಂಧನೆಗಳನ್ನು ಹೊಂದಿರುತ್ತದೆ: ಇದೀಗ ಮುಸ್ಲಿಂ ವಿವಾಹಗಳನ್ನು ಸರ್ಕಾರ ನೋಂದಣಿ ಮಾಡಿಕೊಳ್ಳಲಿದೆ ಹಾಗೂ ಈ ಹಿಂದಿನಂತೆ ಖಾಝಿಗಳು ಮಾಡುವುದಿಲ್ಲ ಮತ್ತು ಈ ನೋಂದಣಿ ಬಾಲ್ಯವಿವಾಹವನ್ನು ಕಾನೂನುಬಾಹಿರ ಎಂದು ಪರಿಗಣಿಸಲಿದೆ" ಎಂದು ಸಿಎಂ ಹಿಮಾಂತ ಬಿಸ್ವ ಶರ್ಮಾ ಎಕ್ಸ್ ಪೋಸ್ಟ್‍ನಲ್ಲಿ ವಿವರಿಸಿದ್ದಾರೆ.
ಬ್ರಿಟಿಷರ ಕಾಲದ ಕಾನೂನಿನಿಂದಾಗಿ 1935ರಿಂದ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವ ಅಧಿಕಾರ ಪಡೆದಿರುವ 94 ಖಾಝಿಗಳ ಬಳಿ ಇರುವ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಮತ್ತು ರಿಜಿಸ್ಟ್ರಾರ್‍ಗಳು ಪಡೆಯಲು ಅನುವು ಮಾಡಿಕೊಡಲಾಗಿದೆ.
"ಖಾಝಿಗಳು ಅಪ್ರಾಪ್ತ ವಯಸ್ಕರ ವಿವಾಹಗಳನ್ನು ಕೂಡಾ ನೋಂದಾಯಿಸುತ್ತಾರೆ. ಇದೀಗ ಬಾಲ್ಯವಿವಾಹ ನಡೆಯಲು ಸಾಧ್ಯವಿಲ್ಲ. ಬಾಲ್ಯವಿವಾಹದ ಪಿಡುಗು ನಿರ್ನಾಮ ಮಾಡಲು ನಾವು ಬಯಸುತ್ತೇವೆ. ಇಸ್ಲಾಮಿಕ್ ವಿವಾಹ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ನೋಂದಣಿ ಭಾಗವಷ್ಟೇ ಬದಲಾಗಲಿದೆ. ವಿವಾಹ ಮತ್ತು ವಿಚ್ಛೇದನವನ್ನು ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.