×
Ad

‘ಶಹಾಬುದ್ದೀನ್ ಪುತ್ರ ಗೆದ್ದರೆ ಹಿಂದೂಗಳಿಗೆ ಸೋಲು’ : ಬಿಹಾರ ಚುನಾವಣಾ ರ‍್ಯಾಲಿಯಲ್ಲಿ ಹಿಮಂತ ಬಿಸ್ವಾ ಶರ್ಮಾ ವಿವಾದಾತ್ಮಕ ಹೇಳಿಕೆ

Update: 2025-11-04 19:21 IST

ಹಿಮಂತ ಬಿಸ್ವಾ ಶರ್ಮಾ | PC : PTI

ಪಾಟ್ನ: ಬಿಹಾರ ವಿಧಾನಸಭಾ ಚುನಾವಣಾ ಕಣ ದಿನೇದಿನೇ ಕಾವೇರುತ್ತಿದ್ದು, ಅಸ್ಸಾಂ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಹಿಮಂತ ಬಿಸ್ವಾ ಶರ್ಮಾ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿವಾನ್ ಜಿಲ್ಲೆಯ ರಘುನಾಥಪುರ ಕ್ಷೇತ್ರದಲ್ಲಿ ಮಂಗಳವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಹಿಮಂತ ಬಿಸ್ವ ಶರ್ಮಾ, ಆರ್‌ಜೆಡಿ ಅಭ್ಯರ್ಥಿ ಹಾಗೂ ಮೃತ ಮಾಜಿ ಸಂಸದ ಮುಹಮ್ಮದ್ ಶಹಾಬುದ್ದೀನ್ ಅವರ ಪುತ್ರ ಒಸಾಮಾ ಶಹಾಬ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಕ್ಷೇತ್ರದಲ್ಲಿ ಒಬ್ಬ ಒಸಾಮ ಸ್ಪರ್ಧಿಸುತ್ತಿದ್ದಾನೆ. ಅವನ ಹೆಸರು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನಂತೆಯೇ ಇದೆ. ಇಂತಹ ಒಸಾಮ ಗೆದ್ದರೆ ಅದು ಹಿಂದೂಗಳ ಸೋಲು ಎಂದರ್ಥ,” ಎಂದು ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ರಘುನಾಥಪುರ ಎನ್ನುವ ಹೆಸರೇ ರಾಮ-ಸೀತೆಯ ನೆನಪನ್ನು ತರುತ್ತದೆ. ಆದರೆ ಇಲ್ಲಿ ಒಸಾಮ ಇದ್ದಾನೆ ಎಂಬುದು ತಿಳಿದು ಆಶ್ಚರ್ಯವಾಯಿತು. ಶಹಾಬುದ್ದೀನ್ ಕೊಲೆಗಳಲ್ಲಿ ದಾಖಲೆ ನಿರ್ಮಿಸಿದ್ದ. ಅವನ ಮಗ ಎಕೆ–47 ರೈಫಲ್‌ಗಳೊಂದಿಗೆ ಆಟವಾಡುತ್ತ ಬೆಳೆದಿರಬೇಕು,” ಎಂದು ಹೇಳಿದರು.

ಹಿಮಂತ ಬಿಸ್ವ ಶರ್ಮಾ, ಒಸಾಮರ ತಾಯಿ ಹಾಗೂ ಮಾಜಿ ಸಂಸದೆಯಾದ ಹಿನಾ ಶಹಾಬ್ ಅವರನ್ನು ಉಲ್ಲೇಖಿಸಿ, “ಲೋಕಸಭಾ ಚುನಾವಣೆಯಲ್ಲಿ ನೀವು ಒಸಾಮನ ತಾಯಿಯನ್ನು ಸೋಲಿಸಿದಂತೆಯೇ, ಈ ಬಾರಿ ಒಸಾಮನನ್ನೂ ಸೋಲಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ. ನವೆಂಬರ್ 14ರಂದು ಅಸ್ಸಾಂನ ಕಾಮಾಖ್ಯಾ ದೇವಾಲಯದಲ್ಲಿ ಕುಳಿತು ಈ ಕ್ಷೇತ್ರದ ಫಲಿತಾಂಶವನ್ನು ನಾನು ನೋಡುತ್ತೇನೆ,” ಎಂದರು.

ಅಸ್ಸಾಂ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಮುಸ್ಲಿಂ ನುಸುಳುಕೋರರು, ಮದರಸಾ ಶಿಕ್ಷಕರ ವೇತನ ಮತ್ತು ಬಹುಪತ್ನಿತ್ವ ಕಾನೂನು ಕುರಿತು ಟೀಕೆ ಮಾಡಿದರು. “ನುಸುಳುಕೋರರು 1 ಲಕ್ಷ ಎಕರೆ ಭೂಮಿಯನ್ನು ಕಬಳಿಸಿದ್ದರು. ಅದರಲ್ಲಿ 50 ಸಾವಿರ ಎಕರೆ ಭೂಮಿಯನ್ನು ಮುಕ್ತಗೊಳಿಸಿದ್ದೇನೆ. ನುಸುಳುಕೋರರು ನಮ್ಮ ಮಹಿಳೆಯರ ಸುರಕ್ಷತೆಗೆ ಅಪಾಯ,” ಎಂದು ಅವರು ಹೇಳಿದ್ದಾರೆ.

“ಮದರಸಾ ಶಿಕ್ಷಕರ ವೇತನಕ್ಕಾಗಿ ಕಾಂಗ್ರೆಸ್ ಬಿಲ್ ಪಾವತಿಸುತ್ತಿತ್ತು. ಸರಕಾರಿ ವೈದ್ಯರು, ಇಂಜಿನಿಯರ್‌ಗಳಿಗೆ ತರಬೇತಿ ನೀಡಬೇಕು, ಮುಲ್ಲಾಗಳಿಗೆ ಅಲ್ಲ. ಈ ತಿಂಗಳ ಕೊನೆಯಲ್ಲಿ ಮೂರು–ನಾಲ್ಕು ಬಾರಿ ಮದುವೆಯಾದವರನ್ನು ಜೈಲಿಗೆ ಕಳುಹಿಸುವ ಕಾನೂನು ತರಲಿದ್ದೇನೆ,” ಎಂದು ಘೋಷಿಸಿದರು.

ಹಿಮಂತ ಬಿಸ್ವಾ ಶರ್ಮಾ ಬಿಹಾರ ಮತದಾರರನ್ನು ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು)–ಬಿಜೆಪಿ ಮೈತ್ರಿಗೆ ಮತ ಹಾಕುವಂತೆ ಮನವಿ ಮಾಡಿದರು. “ತೇಜಸ್ವಿ–ಒಸಾಮಾ ಜೋಡಿಯಿಂದ ದೂರವಿರಿ,” ಎಂದು ಕರೆ ನೀಡಿದರು.

“ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಬಳಿಕ ದೇಶಾದ್ಯಂತ ಹಿಂದೂಗಳು ಎಚ್ಚರಗೊಂಡಿದ್ದಾರೆ. ಬಿಹಾರದಲ್ಲಿಯೂ ಎನ್‌ಡಿಎ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸುವುದು ಖಚಿತ,” ಎಂದು ಶರ್ಮಾ ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News