ಗೊಗೊಯಿ 15 ದಿನಗಳ ಕಾಲ ಪಾಕಿಸ್ತಾನದಲ್ಲಿ ಏನು ಮಾಡುತ್ತಿದ್ದರು ಎಂದು ಪರಿಶೀಲಿಸಲಾಗುತ್ತಿದೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
ಹಿಮಂತ ಬಿಸ್ವ ಶರ್ಮ | PTI
ಹೊಸದಿಲ್ಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕರಾಗಿರುವ ಗೌರವ್ ಗೊಗೊಯಿ ಅವರ ಮಕ್ಕಳು ಭಾರತೀಯ ಪ್ರಜೆಗಳಲ್ಲ ಎಂದು ಆರೋಪಿಸುವ ಮೂಲಕ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಗೌರವ್ ಗೊಗೊಯಿ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇದರೊಂದಿಗೆ, ಇತ್ತೀಚಿನ ಗೌರವ್ ಗೊಗೊಯಿ ಅವರ 15 ದಿನಗಳ ಪಾಕಿಸ್ತಾನ ಭೇಟಿಯ ಕುರಿತೂ ಪ್ರಶ್ನೆಯೆತ್ತಿದ್ದಾರೆ.
ಈ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಹಿಮಂತ ಬಿಸ್ವ ಶರ್ಮ, "ಗೌರವ್ ಗೊಗೊಯಿ ಅವರ ಪುತ್ರ ಹಾಗೂ ಪುತ್ರಿ ಭಾರತೀಯ ಪ್ರಜೆಗಳಲ್ಲ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿವೆ. ಅವರು 15 ದಿನಗಳ ಕಾಲ ಪಾಕಿಸ್ತಾನದಲ್ಲಿ ಏನು ಮಾಡಿದರು ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ. ಪಾಕಿಸ್ತಾನದಲ್ಲಿ ಯಾವುದೇ ಪ್ರವಾಸಿ ತಾಣಗಳಿಲ್ಲ, ಬದಲಿಗೆ, ಅದು ಭಯೋತ್ಪಾದನೆಯ ಅಡ್ಡೆ", ಎಂದು ಟೀಕಾಪ್ರಹಾರ ನಡೆಸಿದ್ದಾರೆ.
"ಅವರು ಪಾಕಿಸ್ತಾನಕ್ಕೆ ತೆರಳಿದ್ದರು ಎಂಬುದು ಶೇ. ನೂರಕ್ಕೆ ನೂರರಷ್ಟು ದೃಢಪಟ್ಟಿದೆ. ಆದರೆ, ಅವರಲ್ಲಿ 15 ದಿನಗಳ ಕಾಲ ಏನು ಮಾಡಿದರು? ರಾಬರ್ಟ್ ವಾದ್ರಾ ಹಾಗೂ ಗೌರವ್ ಗೊಗೊಯಿ ಭಾರತಕ್ಕಿಂತ ಪಾಕಿಸ್ತಾನದ ಕುರಿತೇ ಹೆಚ್ಚು ಕಾಳಜಿ ಹೊಂದಿದ್ದಾರೆ", ಎಂದೂ ಅವರು ಹರಿಹಾಯ್ದಿದ್ದಾರೆ.
ಇದಕ್ಕೂ ಮುನ್ನ, ಗುರುವಾರದಂದು ಎಕ್ಸ್ ನಲ್ಲಿ ನಿಗೂಢ ಪೋಸ್ಟ್ ಮಾಡಿದ್ದ ಹಿಮಂತ ಬಿಸ್ವ ಶರ್ಮ, "ನಾನು ಇದನ್ನು ಸಂಪೂರ್ಣ ಜವಾಬ್ದಾರಿಯೊಂದಿಗೆ ಹೇಳುತ್ತಿದ್ದೇನೆ - ಅಸ್ಸಾಂನ ಲೋಕಸಭಾ ಸದಸ್ಯರ ಅಪ್ರಾಪ್ತ ಮಕ್ಕಳು ಇನ್ನು ಮುಂದೆ ಭಾರತೀಯ ಪ್ರಜೆಗಳಲ್ಲ. ಆದರಿದು ಆರಂಭ ಮಾತ್ರ. ಮುಂದೆ ಇನ್ನೂ ಹೆಚ್ಚು ಬಯಲಾಗುವುದಿದೆ", ಎಂದು ಬರೆದುಕೊಂಡಿದ್ದ ಬೆನ್ನಿಗೇ, ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.