×
Ad

ದಿಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅತಿಶಿ; ಅರವಿಂದ್ ಕೇಜ್ರಿವಾಲ್ ಕುರ್ಚಿ ಖಾಲಿ ಉಳಿಸಿದ ನೂತನ ಸಿಎಂ

Update: 2024-09-23 12:58 IST

Photo: PTI

ಹೊಸದಿಲ್ಲಿ: ಇಂದು ಆಪ್ ನಾಯಕಿ ಅತಿಶಿ ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ತಮ್ಮ ಪಕ್ಕ ಖಾಲಿ ಕುರ್ಚಿಯನ್ನು ಇಟ್ಟುಕೊಳ್ಳುವ ಮೂಲಕ ಅರವಿಂದ್ ಕೇಜ್ರಿವಾಲ್‌ರೊಂದಿಗಿನ ಭಾವನಾತ್ಮಕ ಸಂಬಂಧವನ್ನು ಮತ್ತೊಮ್ಮೆ ಪ್ರದರ್ಶಿಸಿದರು.

ದಿಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅತಿಶಿ, ತಮ್ಮ ಹಾಗೂ ಭಾರತದ ಸ್ಥಿತಿಯೊಂದಿಗೆ ಭರತ ಮತ್ತು ರಾಮಾಯಣವನ್ನು ಹೋಲಿಸಿದರು. ರಾಮಾಯಣದಲ್ಲಿ ರಾಮನ ಅನುಪಸ್ಥಿತಿಯಲ್ಲಿ ಸಿಂಹಾಸನದ ಮೇಲೆ ಆತನ ಪಾದುಕೆಗಳನ್ನಿಟ್ಟು ಭರತ ರಾಜ್ಯಭಾರ ಮಾಡಿದ ಹೋಲಿಕೆಯನ್ನು ಅವರು ನೀಡಿದರು.

"ನಾನಿಂದು ಭರತ ಹೊತ್ತ ಹೊರೆಯನ್ನೇ ಹೊತ್ತಿದ್ದೇನೆ. ಆತ ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ ರಾಜ್ಯಭಾರ ನಡೆಸಿದಂತೆಯೆ, ಮುಂದಿನ ನಾಲ್ಕು ತಿಂಗಳ ಕಾಲ ನಾನು ಅದೇ ಸ್ಫೂರ್ತಿಯಲ್ಲಿ ದಿಲ್ಲಿ ಆಡಳಿತ ನಡೆಸಲಿದ್ದೇನೆ" ಎಂದು ಅವರು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ದಿಲ್ಲಿಯ ಜನರು ಮತ್ತೆ ಅರವಿಂದ್ ಕೇಜ್ರಿವಾಲ್‌ರನ್ನು ಅಧಿಕಾರಕ್ಕೆ ಮರಳಿ ತರಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

"ಈ ಕುರ್ಚಿ ಅರವಿಂದ್ ಕೇಜ್ರಿವಾಲ್‌ಗೆ ಸೇರಿದ್ದಾಗಿದೆ. ಫೆಬ್ರವರಿ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಜನರು ಮತ್ತೆ ಅವರನ್ನು ಮುಖ್ಯಮಂತ್ರಿಯಾಗಿ ಚುನಾಯಿಸುತ್ತಾರೆ ಎಂಬ ಖಾತರಿ ನನಗಿದೆ. ಅಲ್ಲಿಯವರೆಗೆ, ಅವರ ಬರುವಿಕೆಗಾಗಿ ಈ ಕುರ್ಚಿ ಇದೇ ಕಚೇರಿಯಲ್ಲಿ ಕಾಯುತ್ತಿರುತ್ತದೆ" ಎಂದು ಅವರು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News