×
Ad

3.85 ಕೋಟಿ ರೂ. ಮೌಲ್ಯದ ‘ಅಯೋಧ್ಯೆ ರಮಲಲ್ಲಾ ಪ್ರಸಾದ’ ವಂಚನೆ ಜಾಲ ಬಯಲು; ಆರೋಪಿಯ ಬಂಧನ

Update: 2025-06-05 22:28 IST

PC : PTI

ಲಕ್ನೋ: ದೇಗುಲ ನಗರಿ ಅಯೋಧ್ಯೆಯ ಇತಿಹಾಸದಲ್ಲೇ ಅತಿ ದೊಡ್ಡ ಸೈಬರ್ ಹಗರಣವೊಂದನ್ನು ಉತ್ತರಪ್ರದೇಶ ಪೊಲೀಸರು ಭೇದಿಸಿದ್ದಾರೆ. ಶ್ರೀರಾಮ ಮಂದಿರ ದೇವಾಲಯದ ರಾಮಲಲ್ಲಾ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸುವುದಾಗಿ ನಂಬಿಸಿ ನಕಲಿ ವೆಬ್‌ ಸೈಟ್ ಮೂಲಕ ಭಕ್ತರಿಂದ 3.85 ಕೋಟಿ ರೂ. ಸಂಗ್ರಹಿಸಿದ ಆರೋಪಿಯನ್ನು ಬಂಧಿಸಿದ್ದಾರೆ.

ಉತ್ತರಪ್ರದೇಶದ ಘಾಝಿಯಾಬಾದ್ ನಿವಾಸಿ ಆಶೀಶ್ ಸಿಂಗ್ ವಂಚನೆಯೆಸಗಿದ ಆರೋಪಿ. ಈತ ಅಮೆರಿಕದ ಸಿಯಾಟಲ್‌ ನಲ್ಲಿರುವ ನಾರ್ತ್ ಈಸ್ಟರ್ನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಂಬುದಾಗಿ ಆನ್‌ ಲೈನ್‌ ನಲ್ಲಿ ಸೋಗುಹಾಕಿದ್ದ. ನಕಲಿ ವೆಬ್‌ ಸೈಟ್ ರಚಿಸಿ, ಅಯೋಧ್ಯೆಯ ರಾಮಲಲ್ಲಾ ದೇವರ ಪ್ರಸಾದವನ್ನು ಮನೆಗೆ ತಲುಪಿಸುವುದಾಗಿ ದೇಶವಿದೇಶಗಳ ಭಕ್ತರನ್ನು ಮರಳು ಮಾಡಿದ್ದ.

ಅಮೆರಿಕದಲ್ಲಿ ನೆಲೆಸಿದ್ದ ಆತ 2024ರಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕೆಲವೇ ವಾರಗಳ ಮೊದಲು khadiorganic.com ಎಂಬ ನಕಲಿ ಜಾಲತಾಣವನ್ನು ಆರಂಭಿಸಿದ್ದ. ರಾಮಲಲ್ಲಾ ದೇವರ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸುವುದಾಗಿ ಹೇಳಿ ಆಶೀಶ್ ಸಿಂಗ್ 2023ರ ಡಿಸೆಂಬರ್ 19ರಿಂದ 2024ರ ಜನವರಿ 12ರವರೆಗೆ 6.3 ಲಕ್ಷಕ್ಕೂ ಅಧಿಕ ಸ್ವದೇಶಿ ಹಾಗೂ ಅಂತರ್‌ರಾಷ್ಟ್ರೀಯ ಭಕ್ತರಿಂದ ಆರ್ಡರ್‌ ಗಳನ್ನು ಸಂಗ್ರಹಿಸಿದ್ದ.

ಆಶೀಶ್ ಸಿಂಗ್ ಅಯೋಧ್ಯೆಯ ಶ್ರೀರಾಮಮಂದಿರದ ಪ್ರಸಾದ, ದೇಗುಲದ ಕಿರು ಪ್ರತಿಕೃತಿ ಆಗೂ ಸಂಸ್ಮರಣಾ ನಾಣ್ಯಗಳನ್ನು ತಲುಪಿಸುವ ಕೊಡುಗೆಯನ್ನು ನೀಡಿದ್ದನು. ಇದಕ್ಕಾಗಿ ಆತ ಭಾರತೀಯ ಭಕ್ತರಿಂದ 51 ರೂ. ಹಾಗೂ ಸಾಗರೋತ್ತರ ದೇಶಗಳ ಭಕ್ತರಿಂದ 11 ಅಮೆರಿಕನ್ ಡಾಲರ್‌ ಗಳನ್ನು ರವಾನೆ ಶುಲ್ಕವಾಗಿ ವಿಧಿಸಿದ್ದ.

ಆನ್‌ ಲೈನ್ ಮೂಲಕ ದೇವಾಲಯದ ಹೆಸರಿನಲ್ಲಿ ಸಂದೇಹಾಸ್ಪದ ಚಟುವಟಿಕೆ ನಡೆಯುತ್ತಿರುವುದದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನ ಗಮನಕ್ಕೆ ಬಂದಾಗ, ಅದು ಅಯೋಧ್ಯೆಯ ಸೈಬರ್ ಕ್ರೈಮ್ ಘಟಕಕ್ಕೆ ದೂರು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News