ಹಿಂದುಗಳ ಕ್ಷಮೆ ಯಾಚಿಸಿ, ಇಲ್ಲದಿದ್ದರೆ ಅಯ್ಯಪ್ಪ ಸಂಗಮಮ್ ನಲ್ಲಿ ಪಾಲ್ಗೊಳ್ಳಲು ಬಿಡುವುದಿಲ್ಲ: ಕೇರಳ, ತಮಿಳುನಾಡು ಸಿಎಂಗಳಿಗೆ ಕೇರಳ ಬಿಜೆಪಿ ಮುಖ್ಯಸ್ಥರ ಎಚ್ಚರಿಕೆ
ರಾಜೀವ ಚಂದ್ರಶೇಖರ | PC : PTI
ಕೊಚ್ಚಿ,ಆ.24: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಹಿಂದು ನಂಬಿಕೆ ಮತ್ತು ಶಬರಿಮಲೆಯ ಪವಿತ್ರ ಸಂಪ್ರದಾಯಗಳನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿರುವ ಕೇರಳ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಇದಕ್ಕಾಗಿ ಹಿಂದುಗಳ ಕ್ಷಮೆ ಯಾಚಿಸುವಂತೆ ಅವರನ್ನು ಆಗ್ರಹಿಸಿದ್ದಾರೆ.
ರಾಜ್ಯದ ಸಿಪಿಎಂ ಸರಕಾರವು ‘ಅಯ್ಯಪ್ಪ ಸಂಗಮಂ’ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಸ್ಟಾಲಿನ್ ರನ್ನು ಆಹ್ವಾನಿಸಲಿದೆ ಎಂಬ ವರದಿಗಳಿಗೆ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ಕಾರ್ಯಕ್ರಮವನ್ನು ಜನರನ್ನು ಮೂರ್ಖರನ್ನಾಗಿಸಲು ನಾಟಕ ಎಂದು ಬಣ್ಣಿಸಿದ್ದಾರೆ ಮತ್ತು ಉಭಯ ನಾಯಕರು ಹಿಂದುಗಳು ಮತ್ತು ಅಯ್ಯಪ್ಪ ಭಕ್ತರನ್ನು ಅವಮಾನಿಸಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದು ವಿಜಯನ್ ಮತ್ತು ಸ್ಟಾಲಿನ್ ಅವರಿಗೆ ಎಲ್ಲೆಡೆಯ ಬಿಜೆಪಿ ಕಾರ್ಯಕರ್ತರು ಹಾಗೂ ಕೇರಳ ಮತ್ತು ತಮಿಳುನಾಡಿನ ಹಿಂದುಗಳ ಸ್ಪಷ್ಟ ಸಂದೇಶವಾಗಿದೆ. ನೀವಿಬ್ಬರೂ ವರ್ಷಗಳಿಂದ ಶಬರಿಮಲೆ, ಅಯ್ಯಪ್ಪ ಭಕ್ತರು ಮತ್ತು ಹಿಂದುಗಳ ನಂಬಿಕೆಗೆ ಹಾನಿ ಮತ್ತು ಅವಮಾನವನ್ನು ಮಾಡಿದ್ದೀರಿ ಎಂದೂ ಅವರು ಹೇಳಿದ್ದಾರೆ.
ವಿಜಯನ್ ಹಲವಾರು ಅಯ್ಯಪ್ಪ ಭಕ್ತರನ್ನು ಜೈಲಿಗೆ ತಳ್ಳಿದ್ದಾರೆ, ಇನ್ನೂ ಅನೇಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಯ್ಯಪ್ಪ ಭಕ್ತರ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಹಾಗೂ ಶಬರಿಮಲೆಯ ಪವಿತ್ರ ಸಂಪ್ರದಾಯಗಳನ್ನು ಉಲ್ಲಂಘಿಸಲು ಮತ್ತು ಅವಮಾನಿಸಲು ಎಲ್ಲವನ್ನೂ ಮಾಡಿದ್ದಾರೆ. ಸ್ಟಾಲಿನ್ ಮತ್ತು ಅವರ ನಿಷ್ಪ್ರಯೋಜಕ ಮಗ ಹಿಂದುಗಳನ್ನು ಪದೇ ಪದೇ ಅವಮಾನಿಸಿದ್ದಾರೆ ಮತ್ತು ಇತರ ಟೀಕೆಗಳ ಜೊತೆಗೆ ಹಿಂದು ಧರ್ಮವನ್ನು ವೈರಸ್ ಎಂದೂ ಕರೆದಿದ್ದಾರೆ. ಇವೆಲ್ಲವೂ ಹಿಂದುಗಳ ನೆನಪಿನಲ್ಲಿ ಆಳವಾಗಿ ಬೇರೂರಿವೆ ಮತ್ತು ಅವುಗಳನ್ನು ಎಂದಿಗೂ ಮರೆಯಲು ಅಥವಾ ಕ್ಷಮಿಸಲು ಸಾಧ್ಯವಿಲ್ಲ. ಹೀಗಾಗಿ ಸಿಪಿಎಂ ಸರಕಾರವು ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಆಚರಿಸುತ್ತಿರುವ ‘ಅಯ್ಯಪ್ಪ ಸಂಗಮಂ’ ನಾಟಕವಾಗಿದೆ ಮತ್ತು ಜನರನ್ನು ಮೂರ್ಖರನ್ನಾಗಿಸುವ ತಂತ್ರದ ಭಾಗವಾಗಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಪಿಣರಾಯಿ ಅಯ್ಯಪ್ಪ ಭಕ್ತರ ವಿರುದ್ಧ ಎಲ್ಲ ಪ್ರಕರಣಗಳನ್ನು ಹಿಂದೆಗೆದುಕೊಳ್ಳಬೇಕು. ಜೈಲಿಗೆ ತಳ್ಳಲ್ಪಟ್ಟವರ ಕ್ಷಮೆ ಯಾಚಿಸಬೇಕು ಮತ್ತು ಶಬರಿಮಲೆ ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶ್ರೀ ಅಯ್ಯಪ್ಪನ ಕ್ಷಮೆಯನ್ನು ಕೋರಬೇಕು. ಇದೇ ರೀತಿ ಸ್ಟಾಲಿನ್ ಮತ್ತು ಅವರ ನಿಷ್ಪ್ರಯೋಜಕ ಪುತ್ರ ಉದಯನಿಧಿ ಕೇರಳಕ್ಕೆ ಆಗಮಿಸಲು ಬಯಸಿದ್ದರೆ ಹಿಂದುಗಳ ಕ್ಷಮೆ ಯಾಚಿಸಬೇಕು. ಸ್ಟಾಲಿನ್ ಅಥವಾ ಪಿಣರಾಯಿ ಶಬರಿಮಲೆ ಭಕ್ತರನ್ನು ಮತ್ತು ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದರೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಕೇರಳದ ಎಲ್ಲ ಬಿಜೆಪಿ ಕಾರ್ಯಕರ್ತರು ಅದನ್ನು ಪ್ರತಿರೋಧಿಸುತ್ತಾರೆ ಎಂದು ಚಂದ್ರಶೇಖರ್ ತನ್ನ ಪೋಸ್ಟ್ ನಲ್ಲಿ ಹೇಳಿದ್ದಾರೆ.