×
Ad

ಯೋಗ ಪ್ರವಚನದ ವೀಡಿಯೊದಲ್ಲಿ ಒಬಿಸಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಬಾ ರಾಮ್ ದೇವ್

Update: 2024-01-13 18:30 IST

ಗುರು ಬಾಬಾ ರಾಮದೇವ್ | Photo: PTI  

ಹೊಸದಿಲ್ಲಿ: ಪತಂಜಲಿ ಸ್ಥಾಪಕ ಹಾಗೂ ಯೋಗ ಗುರು ಬಾಬಾ ರಾಮದೇವ್ ಗುರುವಾರ ತಾವು ವೀಡಿಯೋವೊಂದರಲ್ಲಿ ನೀಡಿದ ಹೇಳಿಕೆಯೊಂದರ ಕುರಿತು ಸ್ಪಷ್ಟೀಕರಣ ನೀಡಿ ತಾವು ಓವೈಸಿ ಎಂದು ಹೇಳಿದ್ದು ಒಬಿಸಿ ಅಲ್ಲ ಎಂದು ವಿಚಿತ್ರ ಸ್ಪಷ್ಟನೆ ನೀಡಿದ್ದಾರೆ.

ಬಾಬಾ ರಾಮದೇವ್ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಸೃಷ್ಟಿಸಿತ್ತಲ್ಲದೆ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕರೆಗಳನ್ನೂ ಹಲವರು ಮಾಡಿದ್ದರು.

ವಿವಾದಿತ ವೀಡಿಯೋದಲ್ಲಿ ಬಾಬಾ ರಾಮದೇವ್ ಅವರು ವೇದಿಕೆಯಲ್ಲಿ ಪೂಜೆಯೊಂದನ್ನು ಮಾಡುತ್ತಾ “ನನ್ನ ಮೂಲ ಗೋತ್ರ ಬ್ರಹ್ಮ ಗೋತ್ರ, ನಾನು ಅಗ್ನಿಹೋತ್ರಿ. ನಾನು ಅಗ್ನಿಹೋತ್ರಿ ಬ್ರಾಹ್ಮಣ. ಅವರು ಹೇಳುತ್ತಾರೆ ಬಾಬಾಜಿ ನೀವು ಒಬಿಸಿ…”

ಇದು ಸಾಮಾಜಿಕ ಜಾಲತಾಣದಲ್ಲಿ ಹಲವರ ಆಕ್ರೋಶಕ್ಕೆ ಕಾರಣವಾಯಿತು. ಟ್ರೈಬಲ್ ಆರ್ಮಿ ಸ್ಥಾಪಕ ಹಂಸರಾಜ್ ಮೀನಾ ಎಂಬವರು ಪ್ರತಿಕ್ರಿಯಿಸಿ, “ ರಾಮದೇವ್ ನೋವೊಬ್ಬ ಬ್ರಾಹ್ಮಣರಾಗಿ, ಠಾಕುರ್ ಆಗಿ, ವರ್ತಕರಾಗಿ. ನನಗೆ ಪರಿವೆಯಿಲ್ಲ. ಆದರೆ ಜಾತಿ ಶ್ರೇಷ್ಠತೆಯನ್ನು ತೋರಿ ಈ ರೀತಿ ಒಬಿಸಿ ಸಮುದಾಯವನ್ನು ನೀವು ಹೇಗೆ ಅವಮಾನಿಸಬಾರದು. ನೆನಪಿಡಿ. ಒಬಿಸಿ ಸಮುದಾಯ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಿದ ದಿನ ಅಂಗಡಿ ಮುಚ್ಚಲಿದೆ,” ಎಂದು ಬರೆದಿದ್ದರಲ್ಲದೆ ಬಾಯ್ಕಾಟ್ ಪತಂಜಲಿ ಹ್ಯಾಶ್ ಟ್ಯಾಗ್ ಕೂಡ ಬಳಸಿದ್ದರು.

ಇದರ ಬೆನ್ನಲ್ಲೇ ಪತಂಜಲಿ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬಾಬಾ ರಾಮದೇವ್, “ನಾನು ಓವೈಸಿ ಅಂದಿದ್ದು, ಒಬಿಸಿ ಅಲ್ಲ,” ಎಂದು ವಿಚಿತ್ರ ಸ್ಪಷ್ಟನೆ ನೀಡಿದ್ದಾರೆ. “ನೋಡಿ ಓವೈಸಿ ಸರಿಯಿಲ್ಲ, ಏನು ಸಮಸ್ಯೆ,” ಎಂದರು. ಮುಂದುವರಿದು ಮಾತನಾಡಿದ ಅವರು, “ಓವೈಸಿ ಮತ್ತವರ ಪೂರ್ವಜರು ಯಾವತ್ತೂ ದೇಶವಿರೋಧಿ ಭಾವನೆಗಳನ್ನು ಹೊಂದಿದ್ದರು. ನಾವು ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು,” ಎಂದರು. ವರದಿಗಾರರು “ಒಬಿಸಿ” ಎಂದಾಗ ಪ್ರತಿಕ್ರಿಯಿಸಿದ ರಾಮದೇವ್ “ನಾನು ಯಾವತ್ತೂ ಒಬಿಸಿ ಬಗ್ಗೆ ಏನೂ ತಪ್ಪಾಗಿ ಹೇಳಿಲ್ಲ,” ಎಂದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News