ಪಂಜಾಬ್: ಮೂವರು ಬಬ್ಬರ್ ಖಾಲ್ಸಾ ಉಗ್ರರ ಬಂಧನ
ಸಾಂದರ್ಭಿಕ ಚಿತ್ರ
ಚಂಡೀಗಡ: ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಗುಂಪು ಬಬ್ಬರ್‌ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ)ನ ಮೂವರು ಕಾರ್ಯಕರ್ತರನ್ನು ಪಂಜಾಬ್ ಪೊಲೀಸರ ವಿಶೇಷ ಕಾರ್ಯಾಚರಣೆ ದಳವು (ಎಸ್‌ಎಸ್‌ಓಸಿ)ಬಂಧಿಸಿದೆ.
ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಹರವಿಂದರ್ ರಿಂಡಾ ನೇತೃತ್ವದ ತಂಡದಲ್ಲಿ ಇವರು ಕಾರ್ಯಾಚರಿಸುತ್ತಿದ್ದರು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ಶುಕ್ರವಾರ ತಿಳಿಸಿದ್ದಾರೆ.
ಈ ತಂಡವು ಅಮೃತಸರ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಲಯಗಳ ಮೇಲೆ ದಾಳಿಗಳನ್ನು ನಡೆಸಲು ಹಾಗೂ ಯೋಜಿತ ಹತ್ಯೆಗಳನ್ನು ನಡೆಸಲು ಸಂಚು ಹೂಡಿತ್ತು. ಇವರ ಬಂಧನದೊಂದಿಗೆ ಬೃಹತ್ ಭಯೋತ್ಪಾದಕ ದಾಳಿಯ ಸಂಚೊಂದು ವಿಫಲಗೊಂಡಿದ್ದು, ಅಸಂಖ್ಯಾತ ಅಮಾಯಕರ ಜೀವ ಉಳಿದಿದೆ ಎಂದವರು ಹೇಳಿದ್ದಾರೆ.
ಬಂಧಿತರಿಂದ ಎರಡು ಹ್ಯಾಂಡ್ ಗ್ರೆನೇಡ್‌ಗಳು, ಒಂದು ಗ್ಲೋಕ್ ಪಿಸ್ತೂಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಶೆಹಜ್‌ಪಾಲ್ ಸಿಂಗ್ ಹಾಗೂ ವಿಕ್ರಮ್‌ಜಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ಅಮೃತಸರದ ಗ್ರಾಮಾಂತರ ಪ್ರದೇಶ ರಾಮದಾಸ್‌ನ ನಿವಾಸಿಗಳೆಂದು ತಿಳಿದುಬಂದದೆ. ಇನ್ನೋರ್ವ ಬಾಲಾರೋಪಿಯೆಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಹಾಗೂ ಸ್ಫೋಟಕಗಳ ಕಾಯ್ದೆಯಡಿ, ಮೊಹಾಲಿಯ ಎಸ್‌ಎಸ್‌ಓಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.