ಅಸ್ಸಾಂ ಕಾರ್ಯಾಚರಣೆ ಸಂದರ್ಭ ಅಧಿಕಾರಿಗಳ ತಪ್ಪಿನಿಂದ ‘ಬಾಂಗ್ಲಾದೇಶದೊಳಕ್ಕೆ ತಳ್ಳಲ್ಪಟ್ಟಿದ್ದ’ ಮಹಿಳೆ ವಾಪಸ್
ರಹೀಮಾ ಬೇಗಂ | credit : indianexpress.com
ಗುವಾಹಟಿ: ವಿದೇಶಿ ಪ್ರಜೆಯೆಂಬ ಆರೋಪದಲ್ಲಿ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಯ ಮಹಿಳೆಯೋರ್ವರನ್ನು ಬಂಧಿಸಿದ್ದ ಪೋಲಿಸರು ಆಕೆಯನ್ನು ಬಾಂಗ್ಲಾದೇಶದ ಗಡಿಗೆ ಕರೆದೊಯ್ದು ದಾಟುವಂತೆ ತಿಳಿಸಿದ್ದರು. ಆದರೆ ಆಕೆ ಬಲವಂತದಿಂದ ಬಾಂಗ್ಲಾದೇಶದೊಳಗೆ ತಳ್ಳಲ್ಪಟ್ಟ ಬಳಿಕ ಆಕೆಯ ಪ್ರಕರಣದಲ್ಲಿ ತಮ್ಮ ತಪ್ಪನ್ನು ಕಂಡುಕೊಂಡ ಅಧಿಕಾರಿಗಳು ಆಕೆಯನ್ನು ಭಾರತಕ್ಕೆ ಮರಳಿ ಕರೆ ತಂದಿದ್ದಾರೆ ಎಂದು indianexpress.com ವರದಿ ಮಾಡಿದೆ.
ಅಸ್ಸಾಮಿನ ವಿದೇಶಿಯರ ನ್ಯಾಯಮಂಡಳಿಗಳು ವಿದೇಶಿಯರೆಂದು ಘೋಷಿಸಿರುವವರ ವಿರುದ್ಧ ನಡೆಯುತ್ತಿರುವ ದಾಳಿ ಕಾರ್ಯಾಚರಣೆಗಳ ಭಾಗವಾಗಿ ಕಳೆದ ಕೆಲವು ವಾರಗಳಲ್ಲಿ ಬಂಧಿಸಲ್ಪಟ್ಟವರಲ್ಲಿ ರಹೀಮಾ ಬೇಗಂ(50) ಕೂಡ ಸೇರಿದ್ದರು. ಅವರ ವಕೀಲರ ಪ್ರಕಾರ ಬೇಗಂ ಕುಟುಂಬವು ಅಸ್ಸಾಮಿನಲ್ಲಿ ಪೌರತ್ವಕ್ಕಾಗಿ ಕಟ್-ಆಫ್ ದಿನಾಂಕವಾದ 1971,ಮಾ.25ಕ್ಕೆ ಮೊದಲೇ ಭಾರತವನ್ನು ಪ್ರವೇಶಿಸಿತ್ತು ಎಂದು ವಿದೇಶಿಯರ ನ್ಯಾಯಮಂಡಳಿಯು ಕಳೆದ ತಿಂಗಳು ತೀರ್ಪು ನೀಡಿತ್ತು.
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು,ಘೋಷಿತ ವಿದೇಶಿಯರನ್ನು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಬಾಂಗ್ಲಾದೇಶದೊಳಗೆ ತಳ್ಳಲಾಗುತ್ತಿದೆ ಎಂದು ದೃಢಪಡಿಸಿದ್ದರು.
ಶುಕ್ರವಾರ ಸಂಜೆ ಗೋಲಾಘಾಟ್‌ನ 2 ಪದುಮೋನಿ ಗ್ರಾಮದಲ್ಲಿಯ ತನ್ನ ಮನೆಗೆ ಮರಳಿರುವ ಬೇಗಂ,ಮಂಗಳವಾರ ರಾತ್ರಿ ಜನರ ಗುಂಪಿನೊಂದಿಗೆ ತನ್ನನ್ನು ಬಾಂಗ್ಲಾದೇಶದೊಳಗೆ ತಳ್ಳಲಾಗಿತ್ತು ಎಂದು ಆರೋಪಿಸಿದ್ದಾರೆ.
‘ಮೇ 25ರಂದು ನಾವಿನ್ನೂ ಮಲಗಿದ್ದಾಗ ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ಮನೆಗೆ ಆಗಮಿಸಿದ್ದ ಪೋಲಿಸರು ವಿಚಾರಣೆಗಾಗಿ ನನ್ನನ್ನು ಠಾಣೆಗೆ ಕರೆದೊಯ್ದಿದ್ದರು. ನನ್ನ ಇಬ್ಬರು ಪುತ್ರಿಯರು ಮತ್ತು ಪತಿಯ ಎದುರಿಗೇ ಇದೆಲ್ಲ ನಡೆದಿತ್ತು. ಬೆಳಿಗ್ಗೆಯನ್ನು ಅಲ್ಲಿ ಕಳೆದ ಬಳಿಕ ನನ್ನನ್ನು ಇತರ ಕೆಲವರೊಂದಿಗೆ ಎಸ್‌ಪಿ ಕಚೇರಿಗೆ ಕರೆದೊಯ್ಯಲಾಗಿತ್ತು. ನಾನು ನನ್ನ ದಾಖಲೆಗಳನ್ನು ಒಯ್ದಿದ್ದೆ. ಅವರು ನಮ್ಮ ಬೆರಳಚ್ಚುಗಳನ್ನು ಪಡೆದುಕೊಂಡರು. ರಾತ್ರಿ ನಮ್ಮನ್ನು ವಾಹನದಲ್ಲಿ ಗಡಿಯ ಬಳಿಗೆ ಕರೆದೊಯ್ದಿದ್ದರು. ಭದ್ರತಾ ಪಡೆಗಳು ನಮಗೆ ಒಂದಿಷ್ಟು ಬಾಂಗ್ಲಾದೇಶದ ಕರೆನ್ಸಿಯನ್ನು ನೀಡಿ ಗಡಿ ದಾಟುವಂತೆ ಮತ್ತು ಮರಳಿ ಬರದಂತೆ ನಮಗೆ ಸೂಚಿಸಿದ್ದವು. ನಾವು ಏನೂ ಮಾಡಲು ತೋಚದೇ ಮೊಣಕಾಲು ಮಟ್ಟಕ್ಕೆ ನೀರು ಮತ್ತು ಮಣ್ಣು ತುಂಬಿದ್ದ ಬತ್ತದ ಗದ್ದೆಯ ಮೂಲಕ ನಡೆದು ಗ್ರಾಮವೊಂದನ್ನು ಮುಟ್ಟಿದ್ದೆವು. ಅಲ್ಲಿಯ ಜನರು ನಮ್ಮನ್ನು ಓಡಿಸಿದ್ದರು ಮತ್ತು ಅಲ್ಲಿಯ ಗಡಿ ಭದ್ರತಾ ಪಡೆಗಳು ನಮ್ಮನ್ನು ಕರೆದು ಬಹಳಷ್ಟು ಹೊಡೆದಿದ್ದರು ಮತ್ತು ಎಲ್ಲಿಂದ ಬಂದಿದ್ದೀರೋ ಅಲ್ಲಿಗೇ ಮರಳುವಂತೆ ಸೂಚಿಸಿದ್ದರು’ ಎಂದು ಬೇಗಂ ಹೇಳಿದರು.
‘ಯಾವ ಕಡೆಗೂ ಹೋಗಲು ಸಾಧ್ಯವಾಗದಿದ್ದಾಗ ನಾವು ಇಡೀ ದಿನ ಭತ್ತದ ಗದ್ದೆಯಲ್ಲಿಯೇ ನಿಂತುಕೊಂಡಿದ್ದೆವು ಮತ್ತು ಬಾಯಾರಿಕೆಯಾದಾಗ ಗದ್ದೆಯಲ್ಲಿನ ನೀರನ್ನೇ ಕುಡಿದಿದ್ದೆವು. ಗುರುವಾರ ಸಂಜೆ ಭಾರತದ ಗಡಿ ಸಿಬ್ಬಂದಿಗಳು ನಮ್ಮನ್ನು ಕರೆದು ಬಾಂಗ್ಲಾದೇಶದ ಕರೆನ್ಸಿಯನ್ನು ವಾಪಸ್ ಪಡೆದಿದ್ದರು. ಬಳಿಕ ನಮ್ಮನ್ನು ವಾಹನದ ಮೂಲಕ ಕೊಕ್ರಝಾರ್‌ಗೆ ತರಲಾಗಿತ್ತು. ಉಳಿದವರ ಗತಿ ಏನಾಗಿದೆ ಎನ್ನುವುದು ನನಗೆ ತಿಳಿದಿಲ್ಲ,ಆದರೆ ನನ್ನನ್ನು ಗೋಲಾಘಾಟ್‌ಗೆ ಕರೆತರಲಾಗಿತ್ತು. ನಾನು ಎರಡು ವರ್ಷಗಳ ಕಾಲ ಹೋರಾಡಿದ ಬಳಿಕ ವಿದೇಶಿಯರ ನ್ಯಾಯಮಂಡಳಿ ನನ್ನ ಪರವಾಗಿ ತೀರ್ಪು ನೀಡಿತ್ತು. ನನ್ನ ಬಳಿ ಎಲ್ಲ ದಾಖಲೆಗಳಿದ್ದವು,ಆದರೂ ನನ್ನೊಂದಿಗೆ ಹೀಗೆ ಆಗಿದ್ದು ಹೇಗೆ ಎನ್ನುವುದು ನನಗೆ ಗೊತ್ತಿಲ್ಲ’ ಎಂದರು.
ಶುಕ್ರವಾರ ಸಂಜೆ ಬೇಗಂ ಪತಿ ಮಲಿಕ್ ಅಲಿಗೆ ದೂರವಾಣಿ ಕರೆ ಬಂದಿದ್ದು,ಗೋಲಾಘಾಟ್‌ನಿಂದ ಪತ್ನಿಯನ್ನು ಕರೆದೊಯ್ಯುವಂತೆ ಸೂಚಿಸಲಾಗಿತ್ತು.
‘ಪೋಲಿಸ್ ದಾಖಲೆಗಳು ಮತ್ತು ಜೋರ್ಹಾಟ್‌ನಲ್ಲಿಯ ವಿದೇಶಿಯರ ನೋಂದಣಿ ಕಚೇರಿಯಲ್ಲಿ ಪರಿಶೀಲಿಸಿದಾಗ ಬೇಗಂ ಸರ್ಟಿಫೀಕೇಟ್‌ನಲ್ಲಿಯ ಒಂದು ಅಂಕಿ ತಾಳೆಯಾಗಿರಲಿಲ್ಲ ಎನ್ನುವುದನ್ನು ನಾವು ಕಂಡುಕೊಂಡಿದ್ದೆವು. ಈ ಬಗ್ಗೆ ನಾವು ಎಸ್‌ಪಿಯವರನ್ನು ಸಂಪರ್ಕಿಸಿದ್ದೆವು ಮತ್ತು ಬೇಗಂ ಈಗ ವಾಪಸಾಗಿದ್ದಾಳೆ. ಆದರೆ ಸಮಗ್ರ ಪರಿಶೀಲನೆ ನಡೆದಿರದಿದ್ದು ದುರದೃಷ್ಟಕರವಾಗಿತ್ತು,ಅಂಕಿ ತಾಳೆಯಾಗಿರದಿದ್ದರೆ ಅಧಿಕಾರಿಗಳು ದೃಢಪಡಿಸಿಕೊಳ್ಳಲು ನೋಂದಣಿ ಕಚೇರಿಗೆ ಕರೆ ಮಾಡಬೇಕಿತ್ತು ಎಂದು ಜೋರ್ಹಾಟ್ ವಿದೇಶಿಯರ ನ್ಯಾಯಮಂಡಳಿಯಲ್ಲಿ ಬೇಗಂ ಪ್ರಕರಣವನ್ನು ನಿರ್ವಹಿಸಿದ್ದ ನ್ಯಾಯವಾದಿ ಲಿಪಿಕಾ ದೇಬ್ ಹೇಳಿದರು.