×
Ad

ಯಾವುದೇ ವಿದ್ಯುತ್ ಉತ್ಪಾದಕರು ನಮ್ಮನ್ನು ಒತ್ತೆಯಾಳಾಗಿಸಲು ನಾವು ಬಿಡುವುದಿಲ್ಲ: ಅದಾನಿ ಪಾವತಿ ವಿವಾದದ ನಡುವೆ ಬಾಂಗ್ಲಾದೇಶದ ಹೇಳಿಕೆ

Update: 2024-11-09 18:04 IST

PC : Adani Power

ಢಾಕಾ: ‘ನಾವು ಹಂತ ಹಂತವಾಗಿ ವಿದ್ಯುತ್ ಬಾಕಿಗಳನ್ನು ತೀರಿಸುತ್ತಿದ್ದೇವೆ ಮತ್ತು ಯಾರಾದರೂ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದರೆ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಯಾವುದೇ ವಿದ್ಯುತ್ ಉತ್ಪಾದಕರು ನಮ್ಮನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲು ನಾವು ಬಿಡುವುದಿಲ್ಲ’ ಎಂದು ಬಾಂಗ್ಲಾದೇಶದ ಉಸ್ತುವಾರಿ ಸರಕಾರದ ವಿದ್ಯುತ್ ಮತ್ತು ಇಂಧನ ಸಲಹೆಗಾರ ಮುಹಮ್ಮದ್ ಫಝುಲ್ ಕಬೀರ್ ಖಾನ್ ಅವರು ಹೇಳಿದ್ದಾರೆ.

ಬಾಂಗ್ಲಾದೇಶದಿಂದ 800 ಮಿಲಿಯನ್ ಡಾಲರ್ ಗೂ ಅಧಿಕ ಬಾಕಿಯನ್ನು ವಸೂಲು ಮಾಡಲು ಪ್ರಯತ್ನಿಸುತ್ತಿರುವ ಭಾರತದ ಅದಾನಿ ಪವರ್ ಅದಕ್ಕೆ ವಿದ್ಯುತ್ ಪೂರೈಕೆಯನ್ನು ಇನ್ನಷ್ಟು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಖಾನ್ ಈ ಹೇಳಿಕೆಯನ್ನು ನೀಡಿದ್ದಾರೆ.

ಜಾರ್ಖಂಡ್‌ನ ಗೊಡ್ಡಾದಲ್ಲಿಯ ತನ್ನ 1,600 ಮೆ.ವ್ಯಾ.‌ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಸುತ್ತಿರುವ ಅದಾನಿ ಪವರ್ ಈ ತಿಂಗಳು ಪೂರೈಕೆಯನ್ನು 700-750 ಮೆ.ವ್ಯಾ.ಗಳಿಗೆ ಇಳಿಸಿದೆ. ಆಗಸ್ಟ್ ಆರಂಭದಲ್ಲಿ ಅದು ಬಾಂಗ್ಲಾದೇಶಕ್ಕೆ ಸುಮಾರು 1,400-1,500 ಮೆ.ವಾ. ವಿದ್ಯುತ್ತನ್ನು ಪೂರೈಸುತ್ತಿತ್ತು.

ಪವರ್‌ಗ್ರಿಡ್ ಬಾಂಗ್ಲಾದೇಶದ ಅಂಕಿಅಂಶಗಳು ಮತ್ತು ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿ(ಬಿಪಿಡಿಬಿ)ಯ ಅಧಿಕಾರಿಯೋರ್ವರ ಪ್ರಕಾರ ಗುರುವಾರ ರಾತ್ರಿಯ ವೇಳೆಗೆ ಅದಾನಿ ಪವರ್‌ನಿಂದ ವಿದ್ಯುತ್ ಪೂರೈಕೆ ಪ್ರಮಾಣ ಸುಮಾರು 520 ಮೆ.ವ್ಯಾ.ಗೆ ಇಳಿದಿತ್ತು.

ಬಾಂಗ್ಲಾದೇಶವು ತ್ವರಿತವಾಗಿ ಬಾಕಿಯನ್ನು ಪಾವತಿಸುತ್ತಿದ್ದರೂ ಮತ್ತು ಪಾವತಿಗೆ ನ.7ರ ಗಡುವನ್ನು ಹಿಂದೆಗೆದುಕೊಳ್ಳಲಾಗಿದ್ದರೂ ಕಡಿಮೆ ವಿದ್ಯುತ್‌ಪೂರೈಕೆಯನ್ನು ಪಡೆಯುತ್ತಿದೆ ಎಂದು ಬಿಪಿಡಿಬಿ ಅಧಿಕಾರಿ ತಿಳಿಸಿದರು.

ಸಂಕಷ್ಟದಲ್ಲಿರುವ ಬಾಂಗ್ಲಾದೇಶವು ಅದಾನಿ ಪವರ್‌ಗಾಗಿ 170 ಮಿಲಿಯನ್ ಡಾಲರ್ ಗಳ ಲೆಟರ್ ಆಫ್ ಕ್ರೆಡಿಟ್ ಪಡೆದುಕೊಂಡಿದೆ ಮತ್ತು ಬಾಕಿ ಪಾವತಿಗಳನ್ನು ತ್ವರಿತಗೊಳಿಸುತ್ತಿದೆ ಎಂದು ಸುದ್ದಿಸಂಸ್ಥೆ ‌ʼರಾಯ್ಟರ್ಸ್ʼ ಈ ವಾರ ವರದಿ ಮಾಡಿತ್ತು.

ವಿದ್ಯುತ್ ಪೂರೈಕೆಯಲ್ಲಿ ಕಡಿತ ಮತ್ತು ಬಾಂಗ್ಲಾದೇಶವು ಮಾಡಿರುವ ಪಾವತಿಗಳ ವಿವರಗಳ ಕುರಿತು ಸುದ್ದಿಸಂಸ್ಥೆಯ ವಿಚಾರಣೆಗಳಿಗೆ ಅದಾನಿ ಪವರ್ ಸ್ಪಂದಿಸಿಲ್ಲ.

ಆದರೆ,ಬಾಂಗ್ಲಾದೇಶದಿಂದ ಬೇಡಿಕೆಯನ್ನು ಮತ್ತು ಪಾವತಿ ಬಾಕಿಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಪೂರೈಕೆಯನ್ನು ಕ್ರಮೇಣ ಕಡಿಮೆ ಮಾಡಲಾಗಿದೆ ಎಂದು ಅದಾನಿ ಪವರ್‌ನಲ್ಲಿಯ ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ.

2022ರಲ್ಲಿ ರಷ್ಯಾದಿಂದ ಉಕ್ರೇನ್ ಆಕ್ರಮಣದ ಬಳಿಕ ದುಬಾರಿ ಇಂಧನ ಮತ್ತು ಸರಕುಗಳ ಆಮದುಗಳಿಂದಾಗಿ ತನ್ನ ಬಿಲ್‌ಗಳನ್ನು ಪಾವತಿಸಲು ಬಾಂಗ್ಲಾದೇಶವು ಪರದಾಡುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಪ್ರಧಾನಿ ಶೇಖ್ ಹಸೀನಾರ ಪದಚ್ಯುತಿಗೆ ಕಾರಣವಾದ ರಾಜಕೀಯ ಪ್ರಕ್ಷುಬ್ಧತೆಯೂ ಅದರ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News