ಬಾಂಗ್ಲಾದೇಶೀಯರು ಅಸ್ಸಾಂನಲ್ಲೂ ಇರಬಹುದು: ವಿವಾದದ ಕಿಡಿ ಹೊತ್ತಿಸಿದ ಯೋಜನಾ ಆಯೋಗದ ಮಾಜಿ ಸದಸ್ಯೆಯ ಹೇಳಿಕೆ
ಅದು ಜಿನ್ನಾ ಕನಸು ಎಂದು ತಿರುಗೇಟು ನೀಡಿದ ಹಿಮಂತ ಬಿಸ್ವ ಶರ್ಮ
ಹಿಮಂತ ಬಿಸ್ವ ಶರ್ಮಾ (Photo: PTI)
ಗುವಾಹಟಿ: “ಜಗತ್ತು ಎಷ್ಟು ವಿಶಾಲವಾಗಿದೆಯೆಂದರೆ, ಬಾಂಗ್ಲಾದೇಶೀಯರು ಅಸ್ಸಾಂನಲ್ಲೂ ಇರಬಹುದು” ಎಂದು ಯೋಜನಾ ಆಯೋಗ ಮಾಜಿ ಸದಸ್ಯೆ ಸೈಯ್ಯೆದ ಹಮೀದ್ ನೀಡಿರುವ ಹೇಳಿಕೆ ಅಸ್ಸಾಂ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದದ ಕಿಡಿ ಹೊತ್ತಿಸಿದೆ. ಈ ಹೇಳಿಕೆಗೆ ಅಸ್ಸಾಂ ರಾಜಕೀಯ ವಲಯದಲ್ಲಿ ಟೀಕೆಗಳೂ ವ್ಯಕ್ತವಾಗಿವೆ.
ಅಸ್ಸಾಂಗೆ ಭೇಟಿ ನೀಡಿರುವ ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ, ವಕೀಲ ಪ್ರಶಾಂತ್ ಭೂಷಣ್, ಸಾಮಾಜಿಕ ಹೋರಾಟಗಾರ ಹರ್ಷ್ ಮಂದರ್ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಜವಾಹರ್ ಸಿರ್ಕಾರ್ ಅವರನ್ನೊಳಗೊಂಡ ನಿಯೋಗದಲ್ಲಿ ಸೈಯ್ಯೆದ ಹಮೀದ್ ಕೂಡಾ ಓರ್ವ ಸದಸ್ಯರಾಗಿದ್ದಾರೆ.
ಈ ನಿಯೋಗವು ಶನಿವಾರ ಅಸ್ಸಾಂ ಸರಕಾರ ಇತ್ತೀಚೆಗೆ ತೆರವುಗೊಳಿಸಿರುವ ಗೋಲ್ಪಾರದಲ್ಲಿನ ಸ್ಥಳ ಹಾಗೂ ಈಗಾಗಲೇ ಬೋರ್ದೌರ್ ನಲ್ಲಿ ಸ್ಯಾಟಲೈಟ್ ಟೌನ್ ಶಿಪ್ ನಿರ್ಮಾಣಕ್ಕಾಗಿ ಭೂಸ್ವಾಧೀನ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗಿರುವ ಸ್ಥಳಕ್ಕೆ ಭೇಟಿ ನೀಡಿತ್ತು.
ರವಿವಾರ ಗುವಾಹಟಿಯಲ್ಲಿ ಆಯೋಜನೆಗೊಂಡಿದ್ದ ‘ದಿ ಸ್ಟೇಟ್ ಆಫ್ ದಿ ನೇಶನ್ ವಿತ್ ಸ್ಪೆಷಲ್ ರೆಫರೆನ್ಸ್ ಟು ಅಸ್ಸಾಂ’ ಕುರಿತ ಸಾರ್ವಜನಿಕ ಸಭೆಯಲ್ಲಿ ಈ ನಿಯೋಗದ ಸದಸ್ಯರು ಭಾಗಿಯಾಗಿದ್ದರು. ಅಕ್ಸೋಮ್ ನಾಗರಿಕ ಸನ್ಮಿಲನ್ ಆಯೋಜಿಸಿದ್ದ ಈ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ಅಸ್ಸಾಂನ ಪಕ್ಷೇತರ ರಾಜ್ಯಸಭಾ ಸದಸ್ಯರಾದ ಅಜಿತ್ ಕುಮಾರ್ ಭುಯಾನ್ ವಹಿಸಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹಮೀದ್, “ಅಸ್ಸಾಂನ ಪರಿಸ್ಥಿತಿ ಹೇಗಿದೆಯೆಂದರೆ, ಮುಸಲ್ಮಾನರ ಮೇಲೆ ವಿನಾಶದ ಕರಿನೆರಳು ಮುಸುಕುತ್ತಿರುವಂತಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಸಲಾಗುತ್ತಿದೆ, ದಿಲ್ಲಿಯಲ್ಲಿ ವಾಸಿಸುತ್ತಿರುವ ನಮ್ಮಂಥವರ ಹೃದಯಗಳು ಈ ಬಾರಿ ಇಲ್ಲಿನ ಮುಸ್ಲಿಮರು ಹಾಗೂ ಅವರ ಪರಿಸ್ಥಿತಿಯೊಂದಿಗಿದೆ” ಎಂದು ಹೇಳಿದ್ದರು.
“ಬಾಂಗ್ಲಾದೇಶಿ ಆಗಿರುವುದರಲ್ಲಿ ಯಾವ ಅಪರಾಧವಿದೆ? ಬಾಂಗ್ಲಾದೇಶೀಯರೂ ಮನುಷ್ಯರೇ. ಜಗತ್ತು ಎಷ್ಟು ವಿಶಾಲವಾಗಿದೆಯೆಂದರೆ, ಬಾಂಗ್ಲಾದೇಶೀಯರೂ ಅಸ್ಸಾಂನಲ್ಲಿರಬಹುದು. ಅವರು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ. ಅವರು ಈ ಜನರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಹೇಳುವುದು, ಈ ಜನರು ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಹೇಳುವುದು ತುಂಬಾ ಸಮಸ್ಯಾತ್ಮಕ, ಕುಚೇಷ್ಟೆ ಹಾಗೂ ಮಾನವೀಯತೆಯ ಪಾಲಿಗೆ ವಿನಾಶಕರವಾಗಲಿದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, “ಗಾಂಧಿ ಕುಟುಂಬದ ನಿಕಟವರ್ತಿಗಳಾದ ಸೈಯ್ಯೆದ ಹಮೀದ್, ಅಕ್ರಮ ವಲಸೆಯನ್ನು ಸಕ್ರಮಗೊಳಿಸುತ್ತಿದ್ದು, ಅಸ್ಸಾಂ ಅನ್ನು ಪಾಕಿಸ್ತಾನದ ಭಾಗವಹಿಸುವ ಜಿನ್ನಾರ ಕನಸನ್ನು ಸಕ್ರಮಗೊಳಿಸಲು ಹೊರಟಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಸೈಯ್ಯೆದ ಹಮೀದ್ ರ ಈ ಹೇಳಿಕೆಗೆ ಅಸ್ಸಾಂ ರಾಜ್ಯ ಸಚಿವ ಪಿಜುಶ್ ಹಝಾರಿಕಾ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.