ಬಸ್ತರ್ ಕಾರ್ಯಾಚರಣೆ ತೀವ್ರ: 12 ಮಾವೋವಾದಿಗಳು, ಮೂವರು ಪೊಲೀಸರು ಮೃತ್ಯು
ಸಾಂದರ್ಭಿಕ ಚಿತ್ರ PC: x.com/firstpost
ರಾಯಪುರ: ಛತ್ತೀಸ್ಗಢದ ಬಸ್ತರ್ ಪ್ರದೇಶದಲ್ಲಿ ನಕ್ಸಲೀಯರ ವಿರುದ್ಧದ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದ್ದು, ದಂತೇವಾಡ-ಬಿಜಾಪುರ ಗಡಿಯಲ್ಲಿ ಬುಧವಾರ ದಿನವಿಡೀ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 12 ಮಂದಿ ನಕ್ಸಲೀಯರು ಹತರಾಗಿದ್ದಾರೆ. ಜಿಲ್ಲಾ ಮೀಸಲು ಕಾವಲುಪಡೆಯ ಮೂವರು ಯೋಧರು ಕೂಡಾ ಕಾರ್ಯಾಚರಣೆಯ ವೇಳೆ ಜೀವ ಕಳೆದುಕೊಂಡಿದ್ದಾರೆ.
ನಕ್ಸಲ್ ಪ್ರಭಾವ ದಟ್ಟವಾಗಿರುವ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಬಿರುಸುಗೊಳಿಸಿದ್ದು, ನಕ್ಸಲ್ ಪಾಳಯದಲ್ಲಿ ಭಾರಿ ಸಾವು ನೋವು ಸಂಭವಿಸಿದೆ. ಮತ್ತೊಬ್ಬ ಡಿಆರ್ಜಿ ಕಾನ್ಸ್ಟೇಬಲ್ ಗಾಯಗೊಂಡಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಂತೇವಾಡ ಸಮೀಪದ ಗಂಗಳೂರು ಅರಣ್ಯದಲ್ಲಿ ಬೆಳಿಗ್ಗೆ 9 ಗಂಟೆಗೆ ಚಕಮಕಿ ಆರಂಭವಾಗಿದ್ದು, ಪಶ್ಚಿಮ ಬಸ್ತರ್ ಪ್ರದೇಶದಲ್ಲಿ ದಿನವಿಡೀ ಹೋರಾಟ ಮುಂದುವರಿಯಿತು. ದಂತೇವಾಡ ಮತ್ತು ಬಿಜಾಪುರದಿಂದ ಆಗಮಿಸಿದ್ದ ಡಿಆರ್ಜಿ ಪಡೆಯ ಜತೆ ಎಸ್ಟಿಎಫ್ ಮತ್ತು ಸಿಆರ್ಪಿಎಫ್ನ ಕೋಬ್ರಾ ಘಟಕಗಳು ಕೂಡಾ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿವೆ.
ಛತ್ತೀಸ್ಗಢದಲ್ಲಿ ಈ ವರ್ಷ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟು 268 ಮಂದಿ ಮಾವೋವಾದಿಗಳು ಹತರಾಗಿದ್ದಾರೆ. ಬಸ್ತರ್ನಲ್ಲೇ 239 ಮಂದಿ ಮೃತಪಟ್ಟಿದ್ದರೆ, ರಾಯಪುರ ವಿಭಾಗದ ಗರಿಯಾಬಾದ್ನಲ್ಲಿ 27, ಮೊಹ್ಲಾ-ಮನ್ಪುರ-ಅಂಬಗಢ ಚೌರಿಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ದೇಶವ್ಯಾಪಿ 2026ರ ಮಾರ್ಚ್ ಒಳಗೆ ನಕ್ಸಲ್ ಹಾವಳಿಯನ್ನು ಮಟ್ಟಹಾಕುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಬುಧವಾರದ ಘಟನಾ ಸ್ಥಳದಿಂದ 12 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಸ್ತರ್ ವಲಯ ಐಜಿ ಸುಂದರ್ರಾಜ್ ಹೇಳಿದ್ದಾರೆ. ಎಸ್ಎಲ್ಆರ್ ರೈಫಲ್, .303 ರೈಫಲ್ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಆರ್ಜಿಯ ಯೋಧರಾದ ಮೋನು ವದಡಿ, ದುಕರು ಗೋಂಡೆ ಮತ್ತು ರಮೇಶ್ ಸೋರಿ ಜೀವ ಕಳೆದುಕೊಂಡಿದ್ದು, ಗಾಯಗೊಂಡಿರುವ ಸೋಮದೇವ್ ಯಾದವ್ ಚಿಕಿತ್ಸೆ ಪಡೆಯುತ್ತಿದ್ದರೆ ಎಂದು ವಿವರ ನೀಡಿದ್ದಾರೆ.