×
Ad

ಬಿಬಿಸಿ ವರದಿಗಾರನಿಗೆ ವಿಮಾನದಲ್ಲಿ ಗಾಲಿ ಕುರ್ಚಿ ಬಳಸಲು ಅವಕಾಶ ನಿರಾಕರಿಸಿದ ವಿಮಾನ ಯಾನ ಸಂಸ್ಥೆ

Update: 2024-10-03 21:34 IST

Image Credit: X/@FrankRGardner

ಲಂಡನ್ : ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರಿಗೆ ಗಾಲಿ ಕುರ್ಚಿ ಸೌಲಭ್ಯ ಕಲ್ಪಿಸುವುದು ಮಾನವೀಯ ಆದ್ಯತೆಯನ್ನು ಪಡೆದುಕೊಂಡಿದೆ. ಇದು ಈ ಕಾಲಘಟ್ಟದ ಅನಿವಾರ್ಯ ಸೌಲಭ್ಯವಾಗಿಯೂ ರೂಪುಗೊಂಡಿದೆ. ಆದರೆ, ಪ್ರತಿಷ್ಠಿತ ಬಿಬಿಸಿ ಸುದ್ದಿ ಸಂಸ್ಥೆಯ ವಿಕಲಚೇತನ ವರದಿಗಾರರೊಬ್ಬರು ಪೋಲೆಂಡ್ ನಿಂದ ಲಂಡನ್ ಗೆ ವಿಮಾನದಲ್ಲಿ ತೆರಳುವಾಗ, ಮಾರ್ಗಮಧ್ಯದಲ್ಲಿ ಶೌಚಾಲಯಕ್ಕೆ ತೆರಳಲು ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳು ಗಾಲಿ ಕುರ್ಚಿ ಸೌಲಭ್ಯ ನಿರಾಕರಿಸಿರುವ ಅಮಾನವೀಯ ಘಟನೆ ವರದಿಯಾಗಿದೆ.

ಫ್ರಾಂಕ್ ಗಾರ್ಡನರ್ ಬಿಬಿಸಿಯ ಭದ್ರತಾ ಬಾತ್ಮೀದಾರರಾಗಿದ್ದು, ಅವರು ಇತ್ತೀಚೆಗೆ ಪೋಲೆಂಡ್ ನಿಂದ ಲಂಡನ್ ಗೆ ಲಾಟ್ ಪೊಲಿಶ್ ಏರ್ ಲೈನ್ಸ್ ನಲ್ಲಿ ಲಂಡನ್ ಗೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಅವರು ಮಾರ್ಗಮಧ್ಯದಲ್ಲಿ ಶೌಚಾಲಯಕ್ಕೆ ತೆರಳಲು ಮುಂದಾದಾಗ, ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳು ಅವರಿಗೆ ಗಾಲಿ ಕುರ್ಚಿ ಸೌಲಭ್ಯ ಒದಗಿಸಲು ನಿರಾಕರಿಸಿದ್ದಾರೆ. “ನಮ್ಮಲ್ಲಿ ಶೌಚಾಲಯಕ್ಕೆ ತೆರಳಲು ವಿಮಾನದಲ್ಲಿ ಗಾಲಿ ಕುರ್ಚಿಯ ಸೌಲಭ್ಯವಿಲ್ಲ. ಇದು ವಿಮಾನ ಯಾನ ಸಂಸ್ಥೆಯ ನೀತಿ” ಎಂದು ವಿಮಾನದ ಸಿಬ್ಬಂದಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಫ್ರಾಂಕ್ ಗಾರ್ಡನರ್, ತಮ್ಮ ದೈಹಿಕ ಅನುಭವವು ತ್ರಾಸದಾಯಕ ಮಾತ್ರವಲ್ಲದೆ, ಅಪಮಾನಕಾರಿಯೂ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. “ನಾನು ಸೂಟ್ ತೊಟ್ಟು ನನ್ನ ಸಹ ಪ್ರಯಾಣಿಕರೆದುರು ವಿಮಾನದ ನೆಲದ ಮೇಲೆ ತೆವಳುವುದು ನನ್ನ ಪಾಲಿಗೆ ಅಪಮಾನಕಾರಿಯಾಗಿತ್ತು” ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ಮುಂದೆ ಲಾಟ್ ಪೊಲಿಶ್ ಏರ್ ಲೈನ್ಸ್ ನಲ್ಲಿ ಪ್ರಯಾಣ ಬೆಳೆಸುವುದಿಲ್ಲವೆಂದು ಶಪಥ ಮಾಡಿರುವ ಅವರು, “ಲಾಟ್ ಪೊಲಿಶ್ ಏರ್ ಲೈನ್ಸ್ ನವರು 21ನೇ ಶತಮಾನಕ್ಕೆ ಸೇರ್ಪಡೆಯಾಗುವವರೆಗೂ, ನಾನು ಆ ಸಂಸ್ಥೆಯ ವಿಮಾನದಲ್ಲಿ ಪ್ರಯಾಣ ಬೆಳೆಸುವುದರಿಂದ ದೂರ ಉಳಿಯಲಿದ್ದೇನೆ” ಎಂದು ಘೋಷಿಸಿದ್ದಾರೆ.

ಬಿಬಿಸಿ ಸುದ್ದಿ ಸಂಸ್ಥೆಯ ಭದ್ರತಾ ಬಾತ್ಮೀದಾರರಾದ ಫ್ರಾಂಕ್ ಗಾರ್ಡನರ್, 20 ವರ್ಷಗಳ ಹಿಂದೆ ಅಲ್ ಖೈದಾ ಬಂದೂಕುಧಾರಿಗಳು ಸೌದಿ ಅರೇಬಿಯಾದಲ್ಲಿ ಗುಂಡಿನ ದಾಳಿ ನಡೆಸಿದಾಗ, ಅವರ ಕಾಲುಗಳು ಪಾರ್ಶ್ವವಾಯುಗೆ ತುತ್ತಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News