ಕಾಲ್ತುಳಿತ ತಡೆಗಟ್ಟುವ ಮಾರ್ಗಸೂತ್ರ ರೂಪಿಸಲು ಸಮಿತಿ ರಚಿಸಿದ ಬಿಸಿಸಿಐ
PC : BCCI
ಮುಂಬೈ: ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಇತ್ತೀಚೆಗೆ ನಡೆದ ಭೀಕರ ಕಾಲ್ತುಳಿತದ ಹಿನ್ನೆಲೆಯಲ್ಲಿ, ವಿಜಯದ ಸಂಭ್ರಮಾಚರಣೆಗಳಿಗೆ ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಪೆಕ್ಸ್ ಕೌನ್ಸಿಲ್ ನಿರ್ಧರಿಸಿದೆ.
ಶನಿವಾರ ನಡೆದ ಬಿಸಿಸಿಐಯ 28ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
‘‘ಬೆಂಗಳೂರಿನಲ್ಲಿ ವಿಜಯ ಸಂಭ್ರಮಾಚರಣೆಯ ವೇಳೆ ನಡೆದ ದುರಂತದ ಹಿನ್ನೆಲೆಯಲ್ಲಿ, ಮುಂದೆ ಇಂಥ ಘಟನೆಗಳು ನಡೆಯದಂತೆ ತಡೆಯುವ ದೃಷ್ಟಿಯಿಂದ ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಲು ಅಪೆಕ್ಸ್ ಕೌನ್ಸಿಲ್ ನಿರ್ಧರಿಸಿದೆ’’ ಎಂದು ಬಿಸಿಸಿಐ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಮಿತಿಯ ನೇತೃತ್ವವನ್ನು ದೇವಜಿತ್ ಸೈಕಿಯ ವಹಿಸುವರು ಹಾಗೂ ಪ್ರಭುತೇಜ್ ಸಿಂಗ್ ಭಾಟಿಯ ಮತು ರಾಜೀವ್ ಶುಕ್ಲಾ ಸದಸ್ಯರಾಗಿರುವರು. ಸಮಿತಿಯು 15 ದಿನಗಳಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಿದೆ.
ಈ ತಿಂಗಳ ಆರಂಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ಗೆದ್ದ ಬಳಿಕ, ಬೆಂಗಳೂರಿನ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಡೆದ ನೂಕುನುಗ್ಗಲು ಹಾಗೂ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ.