ಯಾತ್ರಾರ್ಥಿಗಳು, ಪ್ರವಾಸಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಆನ್ ಲೈನ್ ಬುಕಿಂಗ್ ವಂಚನೆ ಬಗ್ಗೆ ಎಚ್ಚರಿಕೆ ವಹಿಸಲು ಕೇಂದ್ರ ಸರಕಾರ ಸೂಚನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಬಹುತೇಕ ಧಾರ್ಮಿಕ ಯಾತ್ರಾರ್ಥಿಗಳು ಹಾಗೂ ಸಂಶಯ ಪಡದ ಪ್ರವಾಸಿಗಳನ್ನು ಗುರಿಯಾಗಿಸಿಕೊಂಡು ದೇಶಾದ್ಯಂತ ಹೆಚ್ಚಳವಾಗಿರುವ ಮುಂಗಡ ಕಾಯ್ದಿರಿಸುವಿಕೆ ವಂಚನೆಯ ಬಗ್ಗೆ ಜಾಗೃತರಾಗಿರುವಂತೆ ಶನಿವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸೈಬರ್ ಸುರಕ್ಷತಾ ಘಟಕ (I4C) ಜನತೆಗೆ ಎಚ್ಚರಿಸಿದೆ.
ನಕಲಿ ಅಂತರ್ಜಾಲ ತಾಣಗಳು, ಸಾಮಾಜಿಕ ಮಾಧ್ಯಮ ಪುಟಗಳು, ವಾಟ್ಸ್ ಆ್ಯಪ್ ಖಾತೆಗಳು, ಗೂಗಲ್ ಹಾಗೂ ಫೇಸ್ ಬುಕ್ ನಂತಹ ವೇದಿಕೆಗಳಲ್ಲಿ ಪ್ರಾಯೋಜಿತ ಜಾಹೀರಾತುಗಳ ಮೂಲಕ ಸೈಬರ್ ವಂಚನೆಯನ್ನು ಎಸಗಲಾಗುತ್ತಿದೆ ಎಂಬ ಸಂಗತಿ ನಮ್ಮ ಗಮನಕ್ಕೆ ಬಂದಿದೆ ಎಂದು ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ ಹೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ದೇಶಾದ್ಯಂತ ಜನರನ್ನು, ವಿಶೇಷವಾಗಿ ಧಾರ್ಮಿಕ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಆನ್ ಲೈನ್ ಮುಂಗಡ ಕಾಯ್ದಿರಿಸುವಿಕೆ ವಂಚನೆಗಳು ನಡೆಯುತ್ತಿವೆ ಎಂದು ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ ಸಾರ್ವಜನಿಕರನ್ನು ಎಚ್ಚರಿಸಿದೆ” ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ ಪ್ರಕಾರ, ಸಂತ್ರಸ್ತರಿಗೆ ಕೇದಾರನಾಥ ಹಾಗೂ ಚಾರ್ ಧಾಮ್ ಯಾತ್ರೆಗೆ ಹೆಲಿಕಾಪ್ಟರ್ ಮುಂಗಡ ಕಾಯ್ದಿರಿಸಲಾಗುವುದು, ಅತಿಥಿ ಗೃಹ ಹಾಗೂ ಹೋಟೆಲ್ ವಾಸ್ತವ್ಯ ಒದಗಿಸಲಾಗುವುದು, ಆನ್ ಲೈನ್ ಬಾರ್ ಅಥವಾ ಟ್ಯಾಕ್ಸಿ ಸೇವೆ ಒದಗಿಸಲಾಗುವುದು ಹಾಗೂ ಧಾರ್ಮಿಕ ಪ್ರವಾಸಿ ಪ್ಯಾಕೇಜ್ ಒದಗಿಸಲಾಗುವುದು ಎಂದು ಈ ವಂಚನೆಯ ಜಾಲಗಳು ಆಮಿಷವೊಡ್ಡುತ್ತಿವೆ ಎಂದು ಹೇಳಲಾಗಿದೆ.
ಇಂತಹ ಅಂತರ್ಜಾಲ ತಾಣಗಳು ಹಾಗೂ ಅವುಗಳ ವ್ಯಕ್ತಿಗತ ವಿವರಗಳು ನೈಜವಾಗಿರುವಂತೆ ಕಂಡು ಬಂದರೂ, ಬಳಕೆದಾರರು ಪಾವತಿ ಮಾಡಿದ ನಂತರ ಯಾವುದೇ ದೃಢೀಕರಣ ಅಥವಾ ಸೇವೆಯನ್ನು ಪಡೆಯುತ್ತಿಲ್ಲ ಹಾಗೂ ಪಾವತಿ ಮಾಡಿದ ನಂತರ, ಸೇವಾದಾರರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದೂ ಎಚ್ಚರಿಸಲಾಗಿದೆ.
“ನಾಗರಿಕರನ್ನು ರಕ್ಷಿಸಲು, ಯಾವುದೇ ಪಾವತಿ ಮಾಡುವುದಕ್ಕೂ ಮುನ್ನ, ಅಂತರ್ಜಾಲ ತಾಣಗಳ ನೈಜತೆಯ ಬಗ್ಗೆ ಜಾಗರೂಕರಾಗಿರಿ ಹಾಗೂ ಅವುಗಳನ್ನು ಪರಿಶೀಲಿಸಿರಿ ಎಂದು ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ ಸಾರ್ವಜನಿಕರನ್ನು ಎಚ್ಚರಿಸಿದೆ. ಗೂಗಲ್, ಫೇಸ್ ಬುಕ್ ಅಥವಾ ವಾಟ್ಸ್ ಆ್ಯಪ್ ಗಳಲ್ಲಿನ ಯಾವುದೇ ಪ್ರಾಯೋಜಿತ ಅಥವಾ ಅಪರಿಚಿತ ಲಿಂಕ್ ಗಳನ್ನು ಒತ್ತುವುದಕ್ಕೂ ಮುನ್ನ ಎಚ್ಚರಿಕೆಯಿಂದಿರಿ ಹಾಗೂ ಮುಂಗಡ ಕಾಯ್ದಿರಿಸುವಿಕೆಗಾಗಿ ಅಧಿಕೃತ ಸರಕಾರಿ ಅಂತರ್ಜಾಲ ತಾಣಗಳು ಅಥವಾ ವಿಶ್ವಾಸಾರ್ಹ ಟ್ರಾವೆಲ್ ಏಜೆನ್ಸಿಗಳನ್ನು ಅವಲಂಬಿಸಿ ಎಂದೂ ಅದು ಕಿವಿಮಾತು ಹೇಳಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ