ಇಂದೋರ್ನಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಶ್ರೀಮಂತ ಭಿಕ್ಷುಕ!
Photo Credit ; indianexpress.com
ಭಿಕ್ಷಾಟನೆ ವಿರೋಧಿ ಕ್ರಮ ಕೈಗೊಳ್ಳುತ್ತಿದ್ದ ಇಂದೋರ್ ಅಧಿಕಾರಿಗಳು ಭಿಕ್ಷುಕನೊಬ್ಬನನ್ನು ಬಂಧಿಸಿ ವಿಚಾರಿಸಿದರೆ, ಆತ ಅಗರ್ಭ ಶ್ರೀಮಂತನೆಂಬ ಸತ್ಯ ಹೊರಬಂದಿದೆ.
ಇಂದೋರ್ನ ಸರಫಾ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ ಅಂಗಡಿ ಇಟ್ಟುಕೊಂಡಿದ್ದ ಮಾಲೀಕರು ಮತ್ತು ವ್ಯಾಪಾರಿಗಳು ವರ್ಷಗಳಿಂದ ಒಂದೇ ದೃಶ್ಯವನ್ನು ನೋಡುತ್ತಿದ್ದರು. ಅದೆಂದರೆ, ಕುಷ್ಟರೋಗದಿಂದ ಕಾಲು ಕಳೆದುಕೊಂಡಿರುವ ವ್ಯಕ್ತಿಯೊಬ್ಬ ಮರದ ಗಾಡಿಯನ್ನು ಎಳೆಯುತ್ತಾ ಅತ್ತಿತ್ತ ಸಾಗಿ ಭಿಕ್ಷೆ ಬೇಡುತ್ತಿರುವುದು. ಬೆನ್ನಿಗೊಂದು ಬ್ಯಾಗ್ ಮತ್ತು ಕೈಗಳಿಗೆ ಹಳೇ ಶೂಗಳನ್ನು ಬೆಂಬಲಕ್ಕಾಗಿ ಸಿಕ್ಕಿಸಿಕೊಂಡು ಕೂತಿದ್ದ ಗಾಡಿ ಎಳೆಯುತ್ತಿದ್ದ.
ಕಳೆದ ವಾರ ಅಧಿಕಾರಿಗಳು ಈ ಭಿಕ್ಷುಕನ ಜೀವನದ ಮತ್ತೊಂದು ಮುಖವನ್ನು ಕಂಡಿದ್ದಾರೆ! ಆತನಿಗೆ ಭಿಕ್ಷೆ ಹಾಕುತ್ತಿದ್ದ ಅನೇಕರಿಗಿಂತಲೂ ಹೆಚ್ಚು ಶ್ರೀಮಂತನಾಗಿದ್ದ ಭಿಕ್ಷುಕ! ಮೂರು ಮನೆಗಳು ಆತನ ಹೆಸರಿನಲ್ಲಿದ್ದವು. ಅನಧಿಕೃತವಾಗಿ ಹಣ ಸಾಲ ಕೊಡುವ ವ್ಯವಹಾರ ಮಾಡುತ್ತಿದ್ದ ಮತ್ತು ಅದರಿಂದ ದಿನಕ್ಕೆ 1000 ರೂ. ಗಳಿಸುತ್ತಿದ್ದ. ಅಟೋಗಳನ್ನು ಬಾಡಿಗೆಗೆ ಕೊಟ್ಟಿದ್ದ.
ಭಿಕ್ಷಾಟನೆಯಿಂದ ರಕ್ಷಿಸಿದ ಆಡಳಿತ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂದೋರ್ನಲ್ಲಿ ಭಿಕ್ಷುಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ 50 ವರ್ಷದ ಮಂಗಿಲಾಲ್ನನ್ನು ರಕ್ಷಿಸಿದ್ದರು! ಅಧಿಕಾರಿಗಳ ಪ್ರಕಾರ ಶನಿವಾರ ರಾತ್ರಿ 10 ಗಂಟೆಗೆ ಮಂಗಿಲಾಲ್ ಬಗ್ಗೆ ಮಾಹಿತಿ ದೊರೆತ ಅಧಿಕಾರಿಗಳು ಆತನನ್ನು ಪತ್ತೆ ಮಾಡಿದ್ದರು. ನಂತರ ಆಘಾತಕಾರಿ ಮಾಹಿತಿ ಹೊರಬಂದಿತ್ತು. “ಈ ವ್ಯಕ್ತಿ ಮೂರು ಕಾಂಕ್ರೀಟ್ ಮನೆಗಳು ಮತ್ತು ಒಂದು ಮೂರು ಮಹಡಿಯ ಕಟ್ಟಡದ ಮಾಲೀಕನಾಗಿದ್ದ. ಮೂರು ಆಟೋ ರಿಕ್ಷಾಗಳನ್ನು ಬಾಡಿಗೆಗೆ ಕೊಟ್ಟಿದ್ದ. ಕಾರಿನಲ್ಲಿ ಭಿಕ್ಷೆಗೆ ಹೋಗುತ್ತಿದ್ದ. ಈ ಉದ್ದೇಶಕ್ಕಾಗಿ ಆತ ಪ್ರತ್ಯೇಕ ಚಾಲಕನನ್ನೂ ನೇಮಿಸಿಕೊಂಡಿದ್ದ” ಎನ್ನುತ್ತಾರೆ ಅಧಿಕಾರಿಗಳು.
ಅಧಿಕಾರಿಗಳ ಪ್ರಕಾರ ಮಂಗಿಲಾಲ್ ಸಫಾರಾ ಪ್ರದೇಶದಲ್ಲಿ ಜನರಿಗೆ ರೂ 4-5 ಲಕ್ಷ ಸಾಲ ಕೊಟ್ಟಿದ್ದ. ಅವರಿಂದ ರೂ 400-500 ಬಡ್ಡಿಯನ್ನೂ ಪಡೆಯುತ್ತಿದ್ದ. ಈ ಭಿಕ್ಷುಕ ಎಂದಿಗೂ ಜನರಿಂದ ಹಣ ಬೇಡುತ್ತಿರಲಿಲ್ಲ. ಸುಮ್ಮನೆ ಅಂಗಡಿ ಸಮೀಪ ಕುಳಿತಿರುತ್ತಿದ್ದ. ಜನರೇ ಆತನಿಗೆ ಸ್ವಯಂ ಆಗಿ ಭಿಕ್ಷೆ ಹಾಕುತ್ತಿದ್ದರು.
ಇಂದೋರ್ನ ಭಾಗತ್ ಸಿಂಗ್ ನಗರ್ನಲ್ಲಿ ಮೂರು ಮಹಡಿಯ ಮನೆ, ಶಿವನಗರ್ನಲ್ಲಿ 600 ಚದರ ಅಡಿಯ ಮನೆ ಮತ್ತು ಅಲ್ವಾಸ್ನಲ್ಲಿ ಒಂದು ಬೆಡ್ರೂಂ ಫ್ಲ್ಯಾಟ್ ಅವನ ಹೆಸರಿನಲ್ಲಿದೆ. ಮಂಗಿಲಾಲ್ ತನ್ನ ಹೆತ್ತವರ ಜೊತೆಗೆ ಅಲ್ವಾಸ್ನಲ್ಲಿ ನೆಲೆಸಿದ್ದ. ಅವರ ಇಬ್ಬರು ಸಹೋದರರು ಪ್ರತ್ಯೇಕ ಮನೆಗಳಲ್ಲಿ ನೆಲೆಸಿದ್ದರು. ಇದೀಗ ಆತನನ್ನು ಉಜ್ಜಯಿನಿಯ ಸೇವಾದಾಮ್ ಆಶ್ರಮಕ್ಕೆ ಕಳುಹಿಸಲಾಗಿದೆ.
ವಿವರ ಪರಿಶೀಲನೆಯ ನಂತರ ಕ್ರಮ
ಭಿಕ್ಷುಕನ ಹೆಸರಿನಲ್ಲಿರುವ ಮನೆಗಳ ಕುರಿತ ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿವಂ ವರ್ಮಾ ಹೇಳಿದ್ದಾರೆ. “ಇಂದೋರ್ನಲ್ಲಿ ಭಿಕ್ಷಾಟನೆ ಮಾಡುವಂತಿಲ್ಲ. ಭಿಕ್ಷುಕರಿಗೆ ಅನನುಕೂಲವಾಗದಂತೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿಕೊಡುತ್ತೇವೆ” ಎಂದು ಶಿವಂ ಹೇಳಿದ್ದಾರೆ.
ಇಂದೋರ್ ಆಡಳಿತ 2024ರಿಂದ ಭಿಕ್ಷಾಟನೆ ವಿರೋಧಿ ಕ್ರಮವನ್ನು ಕಠಿಣವಾಗಿ ಅನುಸರಿಸುತ್ತಿದೆ. ಆರಂಭಿಕ ಸಮೀಕ್ಷೆಯಲ್ಲಿ ಜಿಲ್ಲಾಡಳಿತ 6500 ಬಿಕ್ಷುಕರನ್ನು ರಕ್ಷಿಸಿದೆ. 4,500 ಮಂದಿಯನ್ನು ಭಿಕ್ಷಾಟನೆ ತೊರೆಯುವಂತೆ ಸಲಹೆ ನೀಡಿ ಯಶಸ್ಸು ಸಾಧಿಸಲಾಗಿದೆ. 1600 ಮಂದಿಯನ್ನು ಸೇವಾದಾಮ್ ಆಶ್ರಮಕ್ಕೆ ಕಳುಹಿಸಲಾಗಿದೆ. 172 ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ.