×
Ad

ಬೆಂಗಳೂರು: ಮಗಳಿಗೆ ಕಿರುಕುಳ ಕೊಡಬೇಡ ಎಂದ ಬಾಲಕಿಯ ತಂದೆಯನ್ನು ಹತ್ಯೆಗೈದ ಯುವಕ

Update: 2023-09-03 21:34 IST

ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನೋರ್ವ ಆಕೆಯ ತಂದೆಗೆ ಚಾಕು ಇರಿದು ಹತ್ಯೆಗೈದ ಘಟನೆ ಇಲ್ಲಿನ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ರವಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ಬಾಲಕಿಯ ತಂದೆ ಅನ್ವರ್ ಹುಸೇನ್ ಎಂಬವರ ಕುತ್ತಿಗೆಗೆ ಚಾಕು ಇರಿದು ಝಾಹೀದ್ ಎಂಬಾತ ಹತ್ಯೆಗೈದಿದ್ದಾನೆ. ಅನ್ವರ್ ಹುಸೇನ್‍ನ ಅಪ್ರಾಪ್ತ ಮಗಳ ಬಳಿ ಝಾಹೀದ್, ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಬಾಲಕಿ ಈ ವಿಚಾರವನ್ನು ತಂದೆಗೆ ತಿಳಿಸಿದ್ದಳು ಎನ್ನಲಾಗಿದೆ.

ಮೂರು ತಿಂಗಳ ಹಿಂದೆಯೇ ಝಾಹೀದ್‍ಗೆ, ಅನ್ವರ್ ಹುಸೇನ್ ಬುದ್ದಿ ಹೇಳಿದ್ದರು. ಅಷ್ಟಾದರೂ ಸಹ ಝಾಹೀದ್ ರವಿವಾರ ಪುನಃ ಬಾಲಕಿಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸಿದ್ದ. ಈ ವಿಚಾರ ತಿಳಿದ ಅನ್ವರ್ ಹುಸೇನ್, ಆರೋಪಿಯ ಮನೆ ಬಳಿ ಹೋಗಿ ಆತನ ಮನೆಯವರಿಗೂ ವಿಚಾರ ತಿಳಿಸಿ, ತನ್ನ ಮಗಳ ತಂಟೆಗೆ ಬರದಂತೆ ತಿಳಿ ಹೇಳುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಅನ್ವರ್ ಆರೋಪಿಯ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮನೆಯಿಂದ ಚಾಕು ತೆಗೆದುಕೊಂಡು ಬಂದಿದ್ದ ಆರೋಪಿ, ಏಕಾಏಕಿ ಅನ್ವರ್ ಹುಸೇನ್ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಅನ್ವರ್ ಹುಸೇನ್‍ನನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅನ್ವರ್ ಹುಸೇನ್ ಮೃತಪಟ್ಟಿದ್ದಾರೆ. ಈ ಸಂಬಂಧ ಅಶೋಕ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಝಾಹೀದ್‍ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News