ದಿಲ್ಲಿ ವಿಶ್ವವಿದ್ಯಾಲಯದೆದುರು ಪ್ರತಿಭಟನೆ; ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್, ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ (File Photo: PTI)
ಹೊಸದಿಲ್ಲಿ: ಮಾಜಿ ಸಹಾಯಕ ಪ್ರಾಧ್ಯಾಪಕಿ ರೀತು ಸಿಂಗ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ದಿಲ್ಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಹಾಗೂ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
2020ರಲ್ಲಿ ರೀತು ಸಿಂಗ್ ಅವರನ್ನು ದೌಲತ್ ರಾಮ್ ಕಾಲೇಜು ಸೇವೆಯಿಂದ ವಜಾಗೊಳಿಸಿತ್ತು. ಅವರು ಕಾಲೇಜು ಆಡಳಿತ ಮಂಡಳಿಯ ಜಾತಿ ಆಧಾರಿತ ತಾರತಮ್ಯ ಹಾಗೂ ಕಿರುಕುಳದ ವಿರುದ್ಧ ಪ್ರತಿಭಟಿಸುತ್ತಿದ್ದರು. ಈ ವಿಷಯವು ನ್ಯಾಯಾಲಯದಲ್ಲಿದೆ.
“ಉತ್ತರ ಕ್ಯಾಂಪಸ್ ಬಳಿ ಪ್ರತಿಭಟನೆ ನಡೆಸಲು ತಮ್ಮ ಬೆಂಬಲಿಗರೊಂದಿಗೆ ಆಝಾದ್ ಹಾಗೂ ಕೆಲವು ವಿದ್ಯಾರ್ಥಿಗಳು ಆಗಮಿಸಿದ್ದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಲು ಅನುಮತಿ ಪಡೆಯದೆ ಇದ್ದುದರಿಂದ ಅವರನ್ನು ವಶಕ್ಕೆ ಪಡೆಯಲಾಯಿತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಝಾದ್ ಸೇರಿದಂತೆ ಸುಮಾರು 80 ಮಂದಿಯನ್ನು ವಶಕ್ಕೆ ಪಡೆದು, ನಂತರ ಬುರಾರಿ ಠಾಣೆಗೆ ಕರೆದೊಯ್ದ ಪೊಲೀಸರು, ಕೆಲ ಗಂಟೆಗಳ ನಂತರ ಅವರನ್ನು ಬಿಡುಗಡೆಗೊಳಿಸಿದರು ಎಂದು ಅವರು ಹೇಳಿದ್ದಾರೆ.