ಭೋಪಾಲ ದುರಂತ | ಯೂನಿಯನ್ ಕಾರ್ಬೈಡ್ ತ್ಯಾಜ್ಯ ಪ್ರಾಯೋಗಿಕ ವಿಲೇವಾರಿಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ
PC : NDTV
ಭೋಪಾಲ: ಪೀತಾಂಪುರದಲ್ಲಿರುವ ನಿಷ್ಕ್ರಿಯ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ 40 ವರ್ಷ ಹಳೆಯ ರಾಸಾಯನಿಕ ತ್ಯಾಜ್ಯವನ್ನು ಪ್ರಾಯೋಗಿಕವಾಗಿ ವಿಲೇವಾರಿ ನಡೆಸಲು ರಾಜ್ಯ ಸರಕಾರಕ್ಕೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ.
ದಹನ ಪ್ರಯೋಗಗಳು ಫೆಬ್ರವರಿ 27ರಿಂದ ಮೂರು ಹಂತಗಳಲ್ಲಿ ನಡೆಯಲಿದೆ ಎಂದು ಅಡ್ವೊಕೇಟ್ ಜನರಲ್ ಪ್ರಶಾಂತ್ ಸಿಂಗ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ತ್ಯಾಜ್ಯ ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತೆಗೆದುಕೊಂಡ ಕ್ರಮಗಳ ಕುರಿತು ಅನುಸರಣಾ ವರದಿಯನ್ನು ರಾಜ್ಯ ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿದೆ. ನ್ಯಾಯಾಲಯ ಜನವರಿಯಲ್ಲಿ ಈ ವರದಿ ಕೋರಿತ್ತು.
1984 ಡಿಸೆಂಬರ್‌ನಲ್ಲಿ ಭೋಪಾಲದಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ನ ಕೀಟನಾಶಕ ಘಟಕದಿಂದ ಮಿಥೇನ್ ಐಸೋನೇಟ್ ಹಾಗೂ ಇತರ ವಿಷಕಾರಿ ಅನಿಲ ಸೋರಿಕೆಯಾಗಿತ್ತು. ಇದರಿಂದ ಸುಮಾರು 5 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದರು. ಅನಂತರ ದಿನಗಳಲ್ಲಿ ಕನಿಷ್ಠ 4,000 ಜನರು ಮೃತಪಟ್ಟಿದ್ದರು.