×
Ad

ಬಿಹಾರ : ರೈತರನ್ನು ದೂಷಿಸಿದ್ದ ಹಿರಿಯ ಪೋಲಿಸ್ ಅಧಿಕಾರಿಯಿಂದ ಕ್ಷಮೆಯಾಚನೆ

Update: 2025-07-19 20:38 IST

ಕುಂದನ್ ಕೃಷ್ಣನ್ | PC :  indiatoday.in 

ಪಾಟ್ನಾ: ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಹಿಂಸಾತ್ಮಕ ಅಪರಾಧಗಳಿಗೂ ಬೆಳೆ ಋತುಗಳಿಗೂ ಸಂಬಂಧವನ್ನು ಕಲ್ಪಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದ ಬಿಹಾರದ ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕ (ಎಡಿಜಿಪಿ-ಕಾನೂನು ಮತ್ತು ಸುವ್ಯವಸ್ಥೆ) ಕುಂದನ್ ಕೃಷ್ಣನ್ ಅವರು ತನ್ನ ಹೇಳಿಕೆಗಳಿಗಾಗಿ ಶನಿವಾರ ಕ್ಷಮೆ ಯಾಚಿಸಿದ್ದಾರೆ.

ರೈತರ ಬಗ್ಗೆ ತನಗೆ ಅಪಾರ ಗೌರವವಿದೆ ಎಂದು ಸಂಕ್ಷಿಪ್ತ ವೀಡಿಯೊ ಸಂದೇಶದ ಆರಂಭದಲ್ಲಿ ಹೇಳಿರುವ ಕೃಷ್ಣನ್, ತನ್ನ ಹೇಳಿಕೆಗಳನ್ನು ತಿರುಚಿದ್ದು ವಿವಾದಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.

‘ರೈತ ಬಾಂಧವರಿಗೆ ನನ್ನ ಶುಭಾಶಯಗಳು’ ಎಂದು ತನ್ನ ಸಂದೇಶವನ್ನು ಆರಂಭಿಸಿರುವ ಕೃಷ್ಣನ್,‘ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿನ ನನ್ನ ಹೇಳಿಕೆಯನ್ನು ಭಾಗಶಃ ತಿರುಚಿ ವರದಿ ಮಾಡಲಾಗಿದೆ. ನಮ್ಮ ಅನ್ನದಾತರಾಗಿರುವ ರೈತರಿಗೂ ಅಪರಾಧಗಳಿಗೂ ಸಂಬಂಧವಿದೆ ಎಂದು ಹೇಳಲು ನಾನೆಂದಿಗೂ ಉದ್ದೇಶಿಸಿರಲಿಲ್ಲ. ನನಗೆ ರೈತರ ಬಗ್ಗೆ ಅಪಾರ ಗೌರವವಿದೆ. ನನ್ನ ಪೂರ್ವಜರೆಲ್ಲರೂ ರೈತರೇ ಆಗಿದ್ದರು. ನಾನು ನನ್ನ ಬೇರುಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದು, ಅವುಗಳಲ್ಲಿ ರೈತ ಸಮುದಾಯವೂ ಒಂದಾಗಿದೆ. ಆದರೂ ನನ್ನ ಹೇಳಿಕೆಯಿಂದ ಯಾರದೇ ಭಾವನೆಗಳಿಗೆ ನೋವುಂಟಾಗಿದ್ದರೆ ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.

ಎಪ್ರಿಲ್ ಮತ್ತು ಜೂನ್ ನಡುವೆ ಬಿಹಾರದಲ್ಲಿ ಯಾವಾಗಲೂ ಅಪರಾಧಗಳು ಹೆಚ್ಚುತ್ತಲೇ ಇರುತ್ತವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ಕೃಷ್ಣನ್, ಬಿಹಾರದಲ್ಲಿ ಎರಡೇ ಬೆಳೆ ಋತುಗಳಿವೆ ಮತ್ತು ಎಪ್ರಿಲ್-ಜೂನ್ ನಡುವಿನ ಅವಧಿಯಲ್ಲಿ ರೈತರಿಗೆ ಯಾವುದೇ ಕೃಷಿ ಕೆಲಸವಿರುವುದಿಲ್ಲ ಎಂದು ಹೇಳಿದ್ದರು.

ಇಂತಹ ಅನೇಕ ನಿರುದ್ಯೋಗಿ ಕೃಷಿಕರು ಸುಲಭವಾಗಿ ಹಣ ಗಳಿಸಲು ಸುಪಾರಿ ಕೊಲೆಗಳಿಗೆ ಒಪ್ಪಿಕೊಳ್ಳುತ್ತಿದ್ದರು ಎಂದೂ ಹೇಳಿದ್ದ ಅವರು, ಹಿಂದಿನ ವರ್ಷಗಳ ಅಂಕಿಅಂಶಗಳನ್ನು ಉಲ್ಲೇಖಿಸುವ ಮೂಲಕ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಕೃಷ್ಣನ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯದ ಪ್ರತಿಪಕ್ಷಗಳು, ನಿತೀಶ್‌ ಕುಮಾರ ಸರಕಾರವು ಅಪರಾಧಗಳನ್ನು ನಿಯಂತ್ರಿಸುವಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ನೆಪಗಳನ್ನು ಹೇಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News