×
Ad

ಬಿಹಾರದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ ವಿರುದ್ಧ ಪ್ರತಿಪಕ್ಷ ಸಂಸದರಿಂದ ಸಂಸತ್ತಿನಲ್ಲಿ ಪ್ರತಿಭಟನೆ

Update: 2025-07-22 19:55 IST

PC : PTI

ಹೊಸದಿಲ್ಲಿ,ಜು.22: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ ಯಾದವ ಸೇರಿದಂತೆ ಪ್ರತಿಪಕ್ಷಗಳ ಸಂಸದರು ಬಿಹಾರದಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಗಳ ಪರಿಷ್ಕರಣೆಯ ವಿರುದ್ಧ ಮಂಗಳವಾರ ಸಂಸತ್ ಭವನ ಸಂಕೀರ್ಣದಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ಜಮಾಯಿಸಿದ್ದ ಪ್ರತಿಪಕ್ಷಗಳ ಸಂಸದರು ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಯ ವಿರುದ್ಧ ಘೊಷಣೆಗಳನ್ನು ಕೂಗಿದರು. ಅದು ಚುನಾವಣೆಗಳನ್ನು ಕದಿಯುವುದಕ್ಕೆ ಸಮಾನವಾಗಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್,ಎಸ್‌ಪಿ,ಆರ್‌ಜೆಡಿ,ಟಿಎಂಸಿ,ಡಿಎಂಕೆ,ಜೆಎಂಎಂ ಇತ್ಯಾದಿಗಳು ಸೇರಿದಂತೆ ಹಲವಾರು ಪ್ರತಿಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು,ಪ್ರಮುಖ ರಾಷ್ಟ್ರೀಯ ವಿಷಯಗಳಿಗೆ ಸ್ಪಂದಿಸಲು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಪಸ್ಥಿತಿಗೆ ಆಗ್ರಹಿಸಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿ,ಆಪರೇಷನ್ ಸಿಂಧೂರ,ಭಾರತ-ಪಾಕಿಸ್ತಾನ ಕದನ ವಿರಾಮ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು,ಬಿಹಾರದಲ್ಲಿ ನಡೆಯುತ್ತಿರುವ ಎಸ್‌ಐಆರ್,ಕ್ಷೇತ್ರ ಪುನರ್ವಿಂಗಡಣೆ,ಏರ್ ಇಂಡಿಯಾ ವಿಮಾನ ಅಪಘಾತ ಮತ್ತು ಮಣಿಪುರದಲ್ಲಿಯ ಪರಿಸ್ಥಿತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಧಾನಿಯವರ ಉತ್ತರದಾಯಿತ್ವಕ್ಕಾಗಿ ಆಗ್ರಹಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ(ಸಂಘಟನೆ) ತಿಳಿಸಿದರು.

ದಲಿತರು,ಆದಿವಾಸಿಗಳು,ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ಪ್ರಮುಖವಾಗಿ ಪ್ರಸ್ತಾವಿಸಲೂ ಪ್ರತಿಪಕ್ಷಗಳ ನಾಯಕರು ನಿರ್ಧರಿಸಿದರು.

ಇವು ಜನರ ಸಮಸ್ಯೆಗಳಾಗಿವೆ ಮತ್ತು ಇವುಗಳಿಗೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ವೇಣುಗೋಪಾಲ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News