ಬಿಹಾರ | 6 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಂಪರ್ಕ ರಸ್ತೆಯಿಲ್ಲದೆ ನಿರುಪಯುಕ್ತ!
ಸಾಂದರ್ಭಿಕ ಚಿತ್ರ | Photo Credit : freepik.com
ಪಾಟ್ನಾ,ಅ.9: ಬಿಹಾರದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ(ಪಿಎಂಜಿಎಸ್‌ವೈ) ಆರು ಕೋ.ರೂ.ಗಳ ವೆಚ್ಚದಲ್ಲಿ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಕಾಮಗಾರಿ ಆರಂಭಗೊಂಡ ನಾಲ್ಕು ವರ್ಷಗಳ ಬಳಿಕವೂ ಸೇತುವೆಯನ್ನು ಸ್ಥಳೀಯ ರಸ್ತೆಗಳ ಜಾಲದೊಂದಿಗೆ ಜೋಡಿಸಬೇಕಿದ್ದ ಸಂಪರ್ಕ ರಸ್ತೆ ಎಂದಿಗೂ ಪೂರ್ಣಗೊಂಡಿಲ್ಲ, ಪರಿಣಾಮವಾಗಿ ಸೇತುವೆ ಅನುಪಯುಕ್ತವಾಗಿಯೇ ಉಳಿದುಕೊಂಡಿದೆ.
ಕಟಿಹಾರ್ ಜಿಲ್ಲೆಯ ದಂಡಖೋರಾ ಬ್ಲಾಕ್‌ನಲ್ಲಿರುವ ಪಸಂತ ಸೇತುವೆಯು ದೂರದಿಂದ ನೋಡಿದಾಗ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳ ಪ್ರತ್ಯೇಕತೆಯನ್ನು ಕೊನೆಗೊಳಿಸಲು ಇತರ ಯಾವುದೇ ಸರಕಾರಿ ನಿರ್ಮಿತ ಸೇತುವೆಯಂತೆ ಕಾಣುತ್ತದೆ. ಆದರೆ ಸೇತುವೆಯ ಒಂದು ತುದಿಯಲ್ಲಿ ಸಂಪರ್ಕ ರಸ್ತೆಯೇ ಇಲ್ಲ. ಇರುವುದು ಹೊಲಗಳು ಮತ್ತು ಸೇತುವೆಯ ಸ್ತಂಭಗಳಲ್ಲೊಂದು ಮಾತ್ರ. ಈ ಸ್ತಂಭದ ಅಡಿಪಾಯ ಖಾಸಗಿ ಒಡೆತನದ ಜಮೀನಿನಲ್ಲಿದೆ.
ಸಮೀಪದ 10-12 ಗ್ರಾಮಗಳ ಜನರು ಜಿಲ್ಲಾ ಕೇಂದ್ರವನ್ನು ತಲುಪಲು ದೂರದ ಸುತ್ತು ಬಳಸಿನ ಮಾರ್ಗಗಳನ್ನು ಬಳಸುವುದನ್ನು ತಪ್ಪಿಸುವುದು ಈ ಸೇತುವೆ ನಿರ್ಮಾಣದ ಉದ್ದೇಶವಾಗಿತ್ತು, ಆದರೆ ಸೇತುವೆ ನಿರ್ಮಾಣಗೊಂಡರೂ ಜನರ ಬವಣೆ ಮುಂದುವರಿದಿದೆ.
ಸೇತುವೆಯ ಕಾಮಗಾರಿ ಸೆ.3, 2020ರಂದು ಆರಂಭಗೊಂಡಿತ್ತು. ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೆ.2, 2021ರ ಗಡುವನ್ನು ನೀಡಲಾಗಿತ್ತು. ಸೇತುವೆ ಪೂರ್ಣಗೊಂಡಂತೆ ಕಾಣುತ್ತದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸಂಪರ್ಕ ರಸ್ತೆ ಮತ್ತು ವಿಶೇಷವಾಗಿ ಖಾಸಗಿ ಜಮೀನಿನಲ್ಲಿ ಬೇರು ಬಿಟ್ಟಿರುವ ಸ್ತಂಭ ಈವರೆಗೂ ನಿರ್ಮಾಣಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.
ಖಾಸಗಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳದೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಗೊಳಿಸಲಾಗಿತ್ತು ಮತ್ತು ಕಾಮಗಾರಿಯೂ ಹಾಗೆಯೇ ಮುಂದುವರಿದಿತ್ತು ಎಂದು ಸ್ಥಳೀಯ ನಿವಾಸಿಗಳು ಬೆಟ್ಟು ಮಾಡಿದ್ದಾರೆ.