ಬಿಹಾರದ ಬಾಲಕಿಯ ಮೇಲೆ ಭುವನೇಶ್ವರದಲ್ಲಿ ಸಾಮೂಹಿಕ ಅತ್ಯಾಚಾರ
ಸಾಂದರ್ಭಿಕ ಚಿತ್ರ | PC : freepik.com
ಭುವನೇಶ್ವರ, ಅ. 18: ಬಿಹಾರದ 17 ವರ್ಷದ ಬಾಲಕಿಯೊಬ್ಬಳ ಮೇಲೆ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ರಾತ್ರಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಆಟೊರಿಕ್ಷಾ ಚಾಲಕರ ಗುಂಪೊಂದು ಬಾಲಕಿಯನ್ನು ರಕ್ಷಿಸಿ ಅಸ್ಪತ್ರೆಯೊಂದಕ್ಕೆ ಸೇರಿಸಿದೆ.
‘‘ಬಾಲಕಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ಯಾಚಾರ ನಡೆದ ಸ್ಥಳದ ಸುತ್ತಲಿನ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ’’ ಎಂದು ಪೊಲೀಸ್ ಕಮಿಶನರ್ ಎಸ್. ದೇವದತ್ತ ಸಿಂಗ್ ಹೇಳಿದ್ದಾರೆ.
ಬಾಲಕಿಯು ಭುವನೇಶ್ವರದ ಅಶೋಕನಗರ ಸಮೀಪ ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದರು ಮತ್ತು ಅವರ ಮೈಮೇಲೆ ಹಲವಾರು ಗಾಯಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಆಟೊರಿಕ್ಷಾ ಚಾಲಕರ ಗುಂಪೊಂದು ಆಕೆಯನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿತು.
ಬಾಲಕಿಯ ಮೇಲೆ ಅಮಾನುಷ ದಾಳಿ ನಡೆಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ. ‘‘ಬಾಲಕಿಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಆದರೆ, ತಾನು ಬಿಹಾರದವಳು ಎನ್ನುವುದನ್ನು ತಿಳಿಸಲು ಅವರಿಗೆ ಸಾಧ್ಯವಾಗಿದೆ’’ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು.