ಬಿಹಾರ | ತನ್ನದೇ ಪಕ್ಷದ ಡಿಸಿಎಂಗೆ ಮತ ನೀಡದಂತೆ ಬಿಹಾರದ ಜನತೆಗೆ ಬಿಜೆಪಿ ನಾಯಕ ಆರ್.ಕೆ.ಸಿಂಗ್ ಆಗ್ರಹ
ಆರ್.ಕೆ.ಸಿಂಗ್ | Photo Credit : PTI
ಪಾಟ್ನಾ,ಅ.20: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಆರ್.ಕೆ.ಸಿಂಗ್ ಅವರು ತನ್ನದೇ ಪಕ್ಷದ ಪ್ರಮುಖ ಅಭ್ಯರ್ಥಿ ಹಾಗೂ ಬಿಹಾರ ಉಪಮುಖ್ಯಮಂತ್ರಿ(ಡಿಸಿಎಂ) ಸಾಮ್ರಾಟ್ ಚೌಧರಿಯವರಿಗೆ ಮತ ನೀಡದಂತೆ ಬಿಹಾರದ ಜನತೆಯನ್ನು ಆಗ್ರಹಿಸಿದ್ದಾರೆ.
ರವಿವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸಿಂಗ್, ‘ಅಪರಾಧ ಹಿನ್ನೆಲೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು, ಅವರು ನಿಮ್ಮದೇ ಜಾತಿಗೆ ಸೇರಿದ್ದರೂ ಅವರನ್ನು ದೂರವಿಡಿ’ ಎಂದು ಜನರಿಗೆ ಸಲಹೆ ನೀಡಿದ್ದಾರೆ.
ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳೂ ಕಳಂಕಿತರಾಗಿದ್ದರೆ ‘ನೋಟಾ’ ಆಯ್ಕೆ ಮಾಡಿಕೊಳ್ಳುವಂತೆಯೂ ಅವರು ಜನರನ್ನು ಆಗ್ರಹಿಸಿದ್ದಾರೆ.
ಸಿಂಗ್ ಹೆಸರಿಸಿರುವ ಕಳಂಕಿತ ಎನ್‌ಡಿಎ ಅಭ್ಯರ್ಥಿಗಳಲ್ಲಿ ಡಿಸಿಎಂ ಚೌಧರಿ (ತಾರಾಪುರ) ಮತ್ತು ಗ್ಯಾಂಗ್‌ಸ್ಟರ್ ಪರಿವರ್ತಿತ ರಾಜಕಾರಣಿ ಜೆಡಿಯು ಅನಂತ ಸಿಂಗ್(ಮೊಕಾಮಾ) ಸೇರಿದ್ದಾರೆ.
ಕಳೆದ ಲೋಕಸಭಾ ಚುನಾವಣೆಗಳಲ್ಲಿ ಆರಾ ಸ್ಥಾನವನ್ನು ಕಳೆದುಕೊಂಡ ಬಳಿಕ ರಾಜಕೀಯವಾಗಿ ಅಪ್ರಸ್ತುತರಾಗಿರುವ ಸಿಂಗ್, ಜಗದೀಶಪುರ ಮತ್ತು ಸಂದೇಶ್‌ನ ಜೆಡಿಯು ಅಭ್ಯರ್ಥಿಗಳನ್ನೂ ಕಳಂಕಿತರೆಂದು ಬಣ್ಣಿಸಿದ್ದಾರೆ. ಆರ್‌ಜೆಡಿ ಅಭ್ಯರ್ಥಿಗಳಾದ ದೀಪು ಸಿಂಗ್(ಆರಾ) ಮತ್ತು ಒಸಾಮಾ ಶಹಾಬ್ (ರಘುನಾಥಪುರ) ಅವರನ್ನೂ ಹೆಸರಿಸಿದ್ದಾರೆ. ಇವರಿಬ್ಬರ ತಂದೆಯಂದಿರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಈ ಹಿಂದೆ ಜನ ಸುರಾಜ್ ಪಕ್ಷದ ವರಿಷ್ಠ ಪ್ರಶಾಂತ್ ಕಿಶೋರ್ ಮಾಡಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರಿಸುವಂತೆ ಸಾಮ್ರಾಟ್ ಚೌಧರಿ ಸೇರಿದಂತೆ ಪಕ್ಷದ ಹಲವಾರು ನಾಯಕರಿಗೆ ಒತ್ತಾಯಿಸಿದ ಬಳಿಕ ಸಿಂಗ್ ಅವರನ್ನು ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿಯಿಂದ ಉಚ್ಚಾಟಿಸಲಾಗಿತ್ತು.
ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಸಿಂಗ್ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿಯೂ ಆಗಿದ್ದಾರೆ. ನರೇಂದ್ರ ಮೋದಿಯವರ ಎರಡನೇ ಅವಧಿಯ ಸರಕಾರದಲ್ಲಿ ಅವರು ವಿದ್ಯುತ್ ಸಚಿವರಾಗಿದ್ದರು.