ಬಿಹಾರ: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಶಾಸಕ ಮಿಶ್ರಿ ಲಾಲ್ ಯಾದವ್
ಪಕ್ಷ ದಲಿತರು, ಹಿಂದುಳಿದವರಿಗೆ ಸೂಕ್ತ ಸ್ಥಾನ ಮಾನ ನೀಡುತ್ತಿಲ್ಲ ಎಂಬ ಆರೋಪ
Photo Credit: X/@PTI_News
ಪಾಟ್ನಾ, ಅ. 11: ಬಿಹಾರದ ಬಿಜೆಪಿ ಶಾಸಕ ಮಿಶ್ರಿ ಲಾಲ್ ಯಾದವ್ ಶನಿವಾರ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಪಕ್ಷ ದಲಿತರು ಹಾಗೂ ಇತರ ಹಿಂದುಳಿದ ಸಮುದಾಯಗಳಿಗೆ ಸೂಕ್ತ ಸ್ಥಾನ ಮಾನ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ದರ್ಭಂಗಾ ಜಿಲ್ಲೆಯ ಅಲಿನಗರ್ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮಿಶ್ರಿ ಲಾಲ್ ಯಾದವ್, ತಾನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಜೈಸ್ವಾಾಲ್ ಗೆ ರಾಜೀನಾಮೆ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಬಾರಿ ಯಾದವ್ ಅವರನ್ನು ಟಿಕೆೆಟ್ ಗೆ ಪರಿಗಣಿಸದೇ ಇರುವ ಹಾಗೂ ಅಲಿನಗರದಿಂದ ಗಾಯಕಿ ಮೈಥಿಲಿ ಠಾಕೂರ್ ಅವರನ್ನು ಬಿಜೆಪಿ ಕಣಕ್ಕಿಳಿಸುವ ವದಂತಿಯ ಹಿನ್ನೆಲೆಯಲ್ಲಿ ಯಾದವ್ ಅವರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾನು ಅಲಿನಗರದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಜಯ ಗಳಿಸಿದ್ದೇನೆ. ಅದಕ್ಕಿಂತ ಹಿಂದೆ ಹಣ ಹಾಗೂ ತೋಳ್ಬಲ ಇದ್ದ ಹಲವರು ಇಲ್ಲಿ ಸ್ಪರ್ಧಿಸಿದ್ದಾರೆ. ಆದರೆ, ಅವರಿಗೆ ಜಯ ಗಳಿಸಲು ಸಾಧ್ಯವಾಗಿಲ್ಲ ಎಂದು 2020ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ವಿಕಾಸಶೀಲ ಇನ್ಸಾನೆ ಪಕ್ಷ (ವಿಐಪಿ)ದ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದ ಯಾದವ್ ಹೇಳಿದ್ದಾರೆ.
ಬಾಲಿವುಡ್ ಸೆಟ್ ವಿನ್ಯಾಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಮುಖೇಶ್ ಸಹಾನಿ ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ಪಕ್ಷದ ಸಂಸ್ಥಾಪಕ. ಈ ಪಕ್ಷ ಬಿಹಾರದ ಆಗಿನ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಭಾಗವಾಗಿತ್ತು. ಅನಂತರ ಎನ್ಡಿಎ ನೀತಿಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಬಿಜೆಪಿಯ ವಿನಂತಿ ಮೇರೆಗೆ ಮುಖೇಶ್ ಸಹಾನಿ ಅವರನ್ನು ನಿತೀಶ್ ಕುಮಾರ್ ಅವರ ಸಂಪುಟದಿಂದ ತೆಗೆದು ಹಾಕಲಾಗಿತ್ತು. ಇದಾದ ಬಳಿಕ ಯಾದವ್ ಸೇರಿದಂತೆ ವಿಕಾಸಶೀಲ ಇನ್ಸಾನ್ ಪಕ್ಷದ ಎಲ್ಲಾ ನಾಲ್ವರು ಶಾಸಕರು ಬಿಜೆಪಿ ಸೇರಿದ್ದರು.