×
Ad

ಬಿಹಾರ ಉಪ ಮುಖ್ಯಮಂತ್ರಿ ಬೆಂಗಾವಲು ವಾಹನದ ಮೇಲೆ ದಾಳಿ; ಚಪ್ಪಲಿ ಎಸೆತ

ಚುನಾವಣಾ ಆಯೋಗ ಹೇಳಿದ್ದೇನು?

Update: 2025-11-06 15:46 IST

Screengrab:X/@ANI

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಇಂದು (ಗುರುವಾರ) ಬಿಹಾರದ ಲಖಿಸರಾಯಿ ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾರ ಬೆಂಗಾವಲು ವಾಹನದ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು, ಸಗಣಿ ಹಾಗೂ ಚಪ್ಪಲಿಗಳನ್ನು ತೂರಿರುವ ಘಟನೆ ನಡೆದಿದೆ. ಇದರ ಬೆನ್ನಿಗೇ, ಈ ದಾಳಿಯ ಹಿಂದೆ ಆರ್‌ಜೆಡಿ ಇದೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಲಖಿಸರಾಯಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮೂರು ಬಾರಿಯ ಬಿಜೆಪಿ ಶಾಸಕರಾದ ವಿಜಯ್ ಕುಮಾರ್ ಸಿನ್ಹಾ, ಈ ದಾಳಿಯನ್ನುಆರ್‌ಜೆಡಿ ಪಕ್ಷದ ಬೆಂಬಲಿಗರು ನಡೆಸಿದ್ದು, ಅವರು ನನ್ನ ಖೋರಿಯಾರಿ ಗ್ರಾಮದ ಭೇಟಿಯನ್ನು ತಡೆಯಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ.

“ಇವರೆಲ್ಲ ಆರ್‌ಜೆಡಿ ಗೂಂಡಾಗಳು. ಎನ್‌ಡಿಎ ಅಧಿಕಾರಕ್ಕೆ ಮರಳಲಿದೆ ಎಂಬುದು ಅವರಿಗೆ ತಿಳಿದಿದೆ. ಹೀಗಾಗಿಯೇ ಅವರು ಗೂಂಡಾಗಿರಿಗೆ ಇಳಿದಿದ್ದಾರೆ. ಅವರು ನನ್ನ ಮತಗಟ್ಟೆ ಏಜೆಂಟ್ ಅನ್ನು ಹೊರ ಹಾಕಿದ್ದು, ಆತನಿಗೆ ಮತದಾನ ಮಾಡಲು ಅವಕಾಶ ನೀಡಿಲ್ಲ.” ಎಂದು ವಿಜಯ್ ಕುಮಾರ್ ಸಿನ್ಹಾ ವಾಗ್ದಾಳಿ ಆರೋಪಿಸಿದ್ದಾರೆ.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಜಯ್ ಕುಮಾರ್ ಸಿನ್ಹಾರ ವಾಹನವನ್ನು ಸುತ್ತುವರಿದಿರುವ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ, ಅವರ ಬೆಂಗಾವಲು ವಾಹನ ಮುಂದೆ ಹೋಗದಂತೆ ತಡೆಯುತ್ತಿರುವುದು ಸೆರೆಯಾಗಿದೆ. ಕೆಲವು ಮಂದಿ ‘ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದು, ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾರ ವಾಹನ ಗ್ರಾಮದೊಳಗೆ ಪ್ರವೇಶಿಸದಂತೆ ಅಡ್ಡಗಟ್ಟಿರುವುದೂ ದಾಖಲಾಗಿದೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಯಾರಿಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಮುರಿಯಲು ಅವಕಾಶ ನೀಡುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಹಾರದ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News