×
Ad

ಬಿಹಾರ | ಚುನಾವಣಾ ಪ್ರಚಾರಕ್ಕೆ ತೆರೆ; ನ.11ರಂದು ಅಂತಿಮ ಹಂತದ ಮತದಾನ

Update: 2025-11-09 22:05 IST

ಅಮಿತ್ ಶಾ , ರಾಹುಲ್‌ ಗಾಂಧಿ , ತೇಜಸ್ವಿ ಯಾದವ್ | PC : NDTV 

ಹೊಸದಿಲ್ಲಿ,ನ.9: ಬಿಹಾರ ವಿಧಾನಸಭೆಯ ದ್ವಿತೀಯ ಹಾಗೂ ಅಂತಿಮ ಹಂತದ ಚುನಾವಣೆಗೆ ಬಹಿರಂಗ ಪ್ರಚಾರವು ರವಿವಾರ ಸಂಜೆ ತೆರೆಬಿದ್ದಿದೆ. ಎನ್‌ಡಿಎ, ಇಂಡಿಯಾ ಮೈತ್ರಿಕೂಟದ ನಾಯಕರು ವಿವಿಧೆಡೆ ಸಾರ್ವಜನಿಕ ಸಭೆಗಳನ್ನು ನಡೆಸಿ ಮತದಾರರನ್ನು ಸೆಳೆಯಲು ಅಂತಿಮ ಹಂತದ ಕಸರತ್ತನ್ನು ನಡೆಸಿದರು.

ಮಂಗಳವಾರ ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ 122 ಸ್ಥಾನಗಳಿಗೆ ಮತದಾನ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ರವಿವಾರ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು.

ಬಿಹಾರ ವಿಧಾನಸಭಾ ಚುನಾವಣೆಯ ಎರಡೂ ಹಂತಗಳಲ್ಲಿ ರಾಹುಲ್‌ ಗಾಂಧಿ ಅವರು ಒಟ್ಟು 15 ಚುನಾವಣಾ ಭಾಷಣಗಳನ್ನು ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಬಿಹಾರದಲ್ಲೇ ಬೀಡು ಬಿಟ್ಟಿರುವ ಅಮಿತ್ ಶಾ ಅವರು ರವಿವಾರದಂದು ಸಸಾರಾಮ್ ಹಾಗೂ ಅರ್ವಾಲ್‌ಗಳಲ್ಲಿ ಬಿಜೆಪಿ ರ‍್ಯಾಲಿಗಳಲ್ಲಿ ಪಾಲ್ಗೊಂಡರು.

ಸತತ ಐದನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಯತ್ತ ಕಣ್ಣಿಟ್ಟಿರುವ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಕೂಡಾ ಸದ್ದಿಲ್ಲದೆ ಚುನಾವಣಾ ಪ್ರಚಾರ ನಡೆಸಿದರು.

ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾದ ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ವ್ಯಾಪಕವಾಗಿ ಚುನಾವಣಾ ಪ್ರಚಾರ ಕೈಗೊಂಡರು. ಅಲ್ಲದೆ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಅವರು ತನ್ನನ್ನು ಘೋಷಿಸಿಕೊಂಡಿದ್ದಾರೆ.

ನೂತನ ಪಕ್ಷ ಜನ ಸೂರಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಅವರು ಕೂಡಾ ರ‍್ಯಾಲಿಗಳನ್ನು ನಡೆಸಿದ್ದಲ್ಲದೆ, ಮನೆಮನೆಗೆ ತೆರಳಿ ಮತಯಾಚಿಸಿದ್ದರು.

ನವೆಂಬರ್ 6ರಂದು ನಡೆದ ಮೊದಲ ಹಂತದಲ್ಲಿ 121 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News