ಬಿಹಾರ | ವಿಕಾಸ ಮಿತ್ರರಿಗೆ ಟ್ಯಾಬ್ಲೆಟ್ ಖರೀದಿಗೆ 25 ಸಾವಿರ ರೂ. ಭತ್ತೆ
Image Source : PTI
ಪಾಟ್ನಾ,ಸೆ.21: ಗ್ರಾಮಾಂತರ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ ಇಲಾಖೆಯಡಿ ಕೆಲಸ ಮಾಡುವ 10 ಸಾವಿರಕ್ಕೂ ಅಧಿಕ ‘ವಿಕಾಸ ಮಿತ್ರ’ರಿಗೆ ಟ್ಯಾಬ್ಲೆಟ್‌ಗಳನ್ನು ಖರೀದಿಸಲು 25 ಸಾವಿರ ರೂ.ಗಳ ಒಂದು ಸಲದ ಭತ್ತೆಯನ್ನು ನೀಡಲಾಗುವುದೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರವಿವಾರ ಘೋಷಿಸಿದ್ದಾರೆ.
ಅಲ್ಲದೆ ವಿಕಾಸ ಮಿತ್ರರ ಪ್ರಯಾಣ ಭತ್ತೆಯನ್ನು ಮಾಸಿಕವಾಗಿ 1900 ರೂ.ಗಳಿಂದ 2500 ರೂ.ಗೆ ಏರಿಕೆ ಹಾಗೂ ಲೇಖನಸಾಮಾಗ್ರಿ ಭತ್ತೆಯನ್ನು ಮಾಸಿಕ 900 ರೂ.ಗಳಿಂದ 1500 ರೂ.ಗೆ ಏರಿಸಲಾಗುವುದೆಂದು ತಿಳಿಸಿದರು.
ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ನಿತೀಶ್ ಕುಮಾರ್ ಅವರು ಈ ಪ್ರಮುಖ ಆರ್ಥಿಕ ನೆರವಿನ ಘೋಷಣೆಗಳನ್ನು ಪ್ರಕಟಿಸಿರುವುದು ಗಮನಾರ್ಹವಾಗಿದೆ.
ದಲಿತರು, ಅಲ್ಪಸಂಖ್ಯಾತರು ಹಾಗೂ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸೇರಿದ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಲ್ಲಿ ದುಡಿಯುವ 30 ಸಾವಿರಕ್ಕೂ ಅಧಿಕ ಶಿಕ್ಷಾ ಸೇವಕರು ಹಾಗೂ ತಾಲಿಮಿ ಮರ್ಕಾಝ್ ಸಿಬ್ಬಂದಿಗೆ 10 ಸಾವಿರ ರೂ. ಆರ್ಥಿಕ ನೆರವನ್ನು ಅವರು ಘೋಷಿಸಿದ್ದಾರೆ.
ಶಿಕ್ಷಕರ ಬೋಧನಾ ಸಾಮಾಗ್ರಿಗಳಿಗೆ ಪಾವತಿಸಲಾಗುವ ಮೊತ್ತವನ್ನು ವಾರ್ಷಿಕವಾಗಿ 2,405 ರೂ.ಗಳಿಂದ 6 ಸಾವಿರ ರೂ.ಏರಿಸಲಾಗಿದೆ.