ಬಿಹಾರ |ಕೋತಿಗಳ ದಾಳಿಗೆ ವ್ಯಕ್ತಿ ಮೃತ್ಯು
Update: 2025-08-18 09:55 IST
PC | PTI
ಮಧುಬಾನಿ: ಜಾನುವಾರುಗಳಿಗೆ ಮೇವು ಸಂಗ್ರಹಿಸುತ್ತಿದ್ದ 67 ವರ್ಷದ ವ್ಯಕ್ತಿಯ ಮೇಲೆ 20 ಕೋತಿಗಳು ದಿಢೀರನೇ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆ ಬಿಹಾರದ ಮಧುಬಾನಿ ಜಿಲ್ಲೆಯ ಶಹಾಪುರ ಗ್ರಾಮದಲ್ಲಿ ನಡೆದಿದೆ.
"ಲೋಹಿತ್ ಸಕ್ಕರೆ ಕಾರ್ಖಾನೆ"ಯ ನಿವೃತ್ತ ಗುಮಾಸ್ತರಾಗಿದ್ದ ರಾಮನಾಥ್ ಚೌಧರಿಯವರ ರಕ್ಷಣೆಗೆ ಜನ ಗುಂಪು ಸೇರುವ ವೇಳೆಗೆ ಚೌಧರಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಮಧುಬಾನಿ ಸದರ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತಾದರೂ, ಅವರು ಆ ವೇಳೆಗೆ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.
ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಸ್ಥಳೀಯರಾದ ಮುಖಿಯಾ ರಾಮಕುಮಾರ್ ಯಾದವ್ ಮಾಹಿತಿ ನೀಡಿದ ತಕ್ಷಣ ಪಂಡುವಲ್ ವೃತ್ತ ನಿರೀಕ್ಷಕ ಪುರುಷೋತ್ತಮ ಕುಮಾರ್ ಮತ್ತು ಠಾಣಾಧಿಕಾರಿ ಎಂ.ಡಿ.ನದೀಮ್ ಸ್ಥಳಕ್ಕೆ ಭೇಟಿ ನೀಡಿ, ಕೋತಿಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು.