ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮೇಲೆ ಹಲ್ಲೆ ಮಾಡಲು ಯತ್ನಿಸಿದವನಿಗೆ ಬೆಂಬಲಿಗರಿಂದ ಥಳಿತ
Photo Credit: X/@PTI
ಪಾಟ್ನ: ಬಿಜೆಪಿ ಗಿರಿರಾಜ್ ಸಿಂಗ್ ಅವರ ಲೋಕಸಭಾ ಕ್ಷೇತ್ರವಾದ ಬಿಹಾರದ ಬೇಗುಸರಾಯ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ.
ಆರೋಪಿಯು ಸಚಿವರ ‘ಜನತಾ ದರ್ಬಾರ್’ (ಸಾರ್ವಜನಿಕ ಕುಂದುಕೊರತೆ ನಿವಾರಣಾ ಕಾರ್ಯಕ್ರಮ)ಕ್ಕೆ ಮನವಿ ನೀಡಲು ಬಂದಿದ್ದ ಎನ್ನಲಾಗಿದೆ. ಹಲ್ಲೆಗೆ ಯತ್ನಿಸಿದ ನಂತರ ಸಚಿವರ ಬೆಂಬಲಿಗರು ಆರೋಪಿಯನ್ನು ಥಳಿಸಿದ್ದಾರೆ ಎನ್ನಲಾಗಿದೆ.
ಸೈಫಿ ಎಂದು ಗುರುತಿಸಲಾದ ವ್ಯಕ್ತಿಯು ಮೌಲ್ವಿಯಂತೆ ಬಟ್ಟೆ ಧರಿಸಿದ್ದು, ತಮ್ಮ ಅರ್ಜಿಯನ್ನು ಪರಿಶೀಲಿಸುವಂತೆ ಕೇಳಿಕೊಂಡರು ಎನ್ನಲಾಗಿದೆ. ಕಾರ್ಯಕ್ರಮ ಮುಗಿದಿದೆ, ಸಮಯ ಮಿತಿಯೊಳಗೆ ಬರಬೇಕು ಎಂದು ಹೇಳಿದಾಗ ವ್ಯಕ್ತಿಯು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದ ಎಂದು ತಿಳಿದು ಬಂದಿದೆ.
"ಗಡ್ಡಧಾರಿಯು ಮೌಲ್ವಿಯ ವೇಷಭೂಷಣದೊಂದಿಗೆ ನನ್ನ ಬಳಿಗೆ ಬಂದು ಮನವಿಯನ್ನು ಕೇಳಲು ನನ್ನನ್ನು ಕೇಳಿದರು, ನಾನು ಅವರಿಗೆ 'ಜನತಾ ದರ್ಬಾರ್' ಮುಗಿದಿದೆ. ಸಮಯಕ್ಕೆ ಬರಬೇಕು ಎಂದು ಹೇಳಿದೆ. ನಂತರ ಅವರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಒಂದು ಹಂತದಲ್ಲಿ ಅವರು ನನ್ನ ವಿರುದ್ಧ ದೈಹಿಕವಾಗಿ ದಾಳಿ ಮಾಡುಲು ಮುಂದಾದರು", ಎಂದು ಗಿರಿರಾಜ್ ಸಿಂಗ್ ಹೇಳಿದರು.
ಬೇಗುಸರಾಯ್ ಎಸ್ಪಿ ಮನೀಶ್ ಅವರು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, "ಶಹಜಾದ್ ಅಲಿಯಾಸ್ ಸೈಫಿ ಎಂಬ ಆರೋಪಿಯು ಭದ್ರತೆ ಮುರಿಯಲು ಪ್ರಯತ್ನಿಸಿದ್ದಾನೆ. ಈತ ಬಲ್ಲಿಯಾ ನಿವಾಸಿಯಾಗಿದ್ದು ವಾರ್ಡ್ ಕೌನ್ಸಿಲರ್ ಎಂದು ಹೇಳಲಾಗಿದೆ. ಆರೋಪಿಯು ಪೊಲೀಸ್ ವಶದಲ್ಲಿದ್ದಾನೆ" ಎಂದು ಹೇಳಿದ್ದಾರೆ.