ದರ್ಭಾಂಗದ ಅಂಬೇಡ್ಕರ್ ಹಾಸ್ಟೆಲ್ ಹೊರಗೆ ರಾಹುಲ್ ಗಾಂಧಿಯನ್ನು ತಡೆದ ಬಿಹಾರ ಪೊಲೀಸರು
Photo credit: PTI
ದರ್ಭಾಂಗ: ಇಂದು (ಗುರುವಾರ) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲೆಂದು ಅಂಬೇಡ್ಕರ್ ವಿದ್ಯಾರ್ಥಿ ನಿಲಯಕ್ಕೆ ಆಗಮಿಸಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಬಿಹಾರ ಪೊಲೀಸರು ವಿದ್ಯಾರ್ಥಿ ನಿಲಯದ ಹೊರಗೇ ತಡೆದಿದ್ದಾರೆ ಎಂದು ವರದಿಯಾಗಿದೆ.
ಪಕ್ಷವು ಆಯ್ಕೆ ಮಾಡಿದ ಸ್ಥಳದಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆಯೇ ಹೊರತು, ಜಿಲ್ಲಾಡಳಿತ ಸೂಚಿಸಿದ ಸ್ಥಳದಲ್ಲಲ್ಲ ಎಂದು ಹೇಳುವ ಮೂಲಕ, ಗುರುವಾರ ದರ್ಭಾಂಗದಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಎನ್‌ಡಿಎ ಸರಕಾರಕ್ಕೆ ಸೆಡ್ಡು ಹೊಡೆದಿತ್ತು.
ಆದರೆ, ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿ ನಿಲಯದಲ್ಲಿ ನಡೆಸಲು ಉದ್ದೇಶಿಸಿದ್ದ ರಾಜ್ಯವ್ಯಾಪಿ ಸಾರ್ವಜನಿಕ ಸಂವಾದ ಕಾರ್ಯಕ್ರಮವಾದ "ಶಿಕ್ಷಾ ನ್ಯಾಯ ಸಂವಾದ"ಕ್ಕೆ ಅನುಮತಿ ನಿರಾಕರಿಸಿದ್ದ ದರ್ಭಾಂಗ ಜಿಲ್ಲಾಡಳಿತ, ಟೌನ್ ಹಾಲ್‌ನಲ್ಲಿ ಆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿತ್ತು. ಈ ಅನುಮತಿಯನ್ನು ತಳ್ಳಿ ಹಾಕಿದ್ದ ಕಾಂಗ್ರೆಸ್, ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲೇ ತನ್ನ ಶಿಕ್ಷಾ ನ್ಯಾಯ ಸಂವಾದ ಕಾರ್ಯಕ್ರಮವನ್ನು ನಡೆಸಲು ಮುಂದಾಗಿತ್ತು.
ಇದಕ್ಕೂ ಮುನ್ನ, ದರ್ಭಾಂಗದಿಂದ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್, "ನಾವು ರಾಹುಲ್ ಗಾಂಧಿ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ನಡೆಯಬೇಕಿರುವ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಸಾಧ್ಯವಿದ್ದರೆ ಜಿಲ್ಲಾಡಳಿತ ಇದನ್ನು ತಡೆಯಲು ಯತ್ನಿಸಲಿ ಮತ್ತು ನಿಲ್ಲಿಸಲಿ" ಎಂದು ಸವಾಲು ಹಾಕಿದ್ದರು.
VIDEO | Bihar: Congress MP and Lok Sabha LoP Rahul Gandhi (@RahulGandhi) stopped by police on his way to Ambedkar hostel in Darbhanga, where he was scheduled to interact with students.
— Press Trust of India (@PTI_News) May 15, 2025
(Full video available on PTI Videos - https://t.co/dv5TRARJn4) pic.twitter.com/ScOiwIRKdK