×
Ad

ಬಿಹಾರ ಚುನಾವಣೆಯು ಮೋದಿ ಆಡಳಿತದ ಅಂತ್ಯದ ಆರಂಭ: ಮಲ್ಲಿಕಾರ್ಜುನ ಖರ್ಗೆ

Update: 2025-09-24 16:15 IST

Photo credit: PTI

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಭ್ರಷ್ಟ ಆಡಳಿತದ ಅಂತ್ಯದ ಆರಂಭವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಪಾಟ್ನಾದಲ್ಲಿ ಘೋಷಿಸಿದರು.

ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಖರ್ಗೆ, ಬಿಜೆಪಿ ಮತ ಕಳ್ಳತನ ಮತ್ತು ಕೋಮು ಧ್ರುವೀಕರಣ ನಡೆಸುತ್ತಿದೆ ಎಂದು ಟೀಕಿಸಿದರು. ಬಿಹಾರದ ಮಾದರಿಯನ್ನು ಅನುಸರಿಸಿ ದೇಶಾದ್ಯಂತ ಲಕ್ಷಾಂತರ ಮತಗಳನ್ನು ಅಳಿಸಲು ಸಂಚು ನಡೆಯುತ್ತಿದೆ ಎಂದು ಅವರು ಹೇಳಿದರು.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ, ಖರ್ಗೆ ಅವರು "ಮೋದಿ ಸರ್ಕಾರದ ರಾಜತಾಂತ್ರಿಕ ವೈಫಲ್ಯದಿಂದ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಪ್ರಧಾನಿಯವರು 'ಸ್ನೇಹಿತರು' ಎಂದು ಹೆಮ್ಮೆಪಡುವವರೇ ಇಂದು ಭಾರತಕ್ಕೆ ತೊಂದರೆ ನೀಡುತ್ತಿದ್ದಾರೆ," ಎಂದು ವ್ಯಂಗ್ಯವಾಡಿದರು.

ಚುನಾವಣಾ ಆಯೋಗದ ನಿಷ್ಠೆ ಮತ್ತು ಪಾರದರ್ಶಕತೆಯು ಪ್ರಶ್ನಿಸುವಂತಾಗಿದೆ ಎಂದು ಖರ್ಗೆ ಆರೋಪಿಸಿದರು. ಜನರ ಅಸಮಾಧಾನಕ್ಕೆ ಸ್ಪಷ್ಟನೆ ನೀಡುವ ಬದಲು ಆಯೋಗ ನಮ್ಮಿಂದ ಅಫಿಡವಿಟ್‌ಗಳನ್ನು ಕೇಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮತ ಕಳ್ಳತನದಿಂದ ದಲಿತರು, ಬುಡಕಟ್ಟು ಜನಾಂಗ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಬಡವರ ಹಕ್ಕುಗಳನ್ನು ಕಸಿಯುವುದೇ ಆಗಿದೆ ಎಂದು ಖರ್ಗೆ ಹೇಳಿದರು. ಬಿಹಾರದಲ್ಲಿ ನಡೆದ "ಮತದಾರ ಅಧಿಕಾರ ಯಾತ್ರೆ" ಜನರಲ್ಲಿ ಜಾಗೃತಿ ಮೂಡಿಸಿದ್ದು, ರಾಹುಲ್ ಗಾಂಧಿಗೆ ಸಾರ್ವಜನಿಕ ಬೆಂಬಲ ಹೆಚ್ಚಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆರ್ಥಿಕ ಕುಸಿತ, ನಿರುದ್ಯೋಗ, ಸಾಮಾಜಿಕ ಧ್ರುವೀಕರಣ ಮತ್ತು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ, ಇವು ಮೋದಿ ಆಡಳಿತದ ವೈಫಲ್ಯಗಳೆಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. "2 ಕೋಟಿ ಉದ್ಯೋಗಗಳ ಭರವಸೆ ಈಡೇರಿಲ್ಲ. ನೋಟು ರದ್ದತಿ ಮತ್ತು ದೋಷಪೂರಿತ ಜಿಎಸ್‌ಟಿಯು ಇಡೀ ದೇಶದ ಆರ್ಥಿಕತೆಯನ್ನು ಹಾಳುಮಾಡಿವೆ," ಎಂದು ಅವರು ಹೇಳಿದರು.

ಎನ್‌ಡಿಎ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳು ತೀವ್ರವಾಗಿದ್ದು, "ನಿತೀಶ್ ಕುಮಾರ್ ಅವರನ್ನು ಬಿಜೆಪಿ ಹೊರೆಯೆಂದು ಪರಿಗಣಿಸುತ್ತಿದೆ," ಎಂದು ಖರ್ಗೆ ಟೀಕಿಸಿದರು. ಬಿಹಾರದ 80% ಜನಸಂಖ್ಯೆ ಒಬಿಸಿ, ಇಬಿಸಿ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಜಾತಿ ಜನಗಣತಿ ಮತ್ತು ಮೀಸಲಾತಿ ನೀತಿಗಳಲ್ಲಿ ಪಾರದರ್ಶಕತೆಯ ಅಗತ್ಯವಿದೆ ಎಂದು ಅವರು ಹೇಳಿದರು.

"ಕಾಂಗ್ರೆಸ್ ಮೈತ್ರಿಕೂಟವು ಬಿಹಾರದಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ ಮತ್ತು ಉತ್ತಮ ಆಡಳಿತವನ್ನು ಒದಗಿಸಲಿದೆ. ಜನತೆ ದೀರ್ಘಕಾಲದಿಂದ ಕನಸು ಕಂಡಿರುವ 'ಸುವರ್ಣ ಬಿಹಾರ'ವನ್ನು ಸಾಕಾರಗೊಳಿಸಲಿದೆ," ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

"2025ರ ವಿಧಾನಸಭಾ ಚುನಾವಣೆಗಳು ಬಿಹಾರಕ್ಕಷ್ಟೇ ಅಲ್ಲ, ಇಡೀ ದೇಶಕ್ಕೆ ಮೈಲಿಗಲ್ಲು. ಇದು ಮೋದಿ ಸರ್ಕಾರದ ಭ್ರಷ್ಟ ಆಡಳಿತದ ಅಂತ್ಯದ ಆರಂಭ," ಎಂದು ಖರ್ಗೆ ಹೇಳಿದರು.

ಸ್ವಾತಂತ್ರ್ಯಾನಂತರ ಬಿಹಾರದಲ್ಲಿ ನಡೆದ ಮೊದಲ ಸಿಡಬ್ಲ್ಯೂಸಿ ಸಭೆಗೆ ರಾಹುಲ್ ಗಾಂಧಿ, ಅಜಯ್ ಮಾಕೆನ್, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಸಚಿನ್ ಪೈಲಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ಸೇರಿದಂತೆ ಉನ್ನತ ನಾಯಕರು ಹಾಜರಿದ್ದರು. ಸಭೆಗೆ ಮುನ್ನ ಖರ್ಗೆ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಧ್ವಜ ಹಾರಿಸಿದರು.

ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್‌ ನಲ್ಲಿ ನಡೆಯುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News