×
Ad

ಬಿಹಾರ ಎಸ್‌ಐಆರ್ | ಶೇ.98ಕ್ಕೂ ಅಧಿಕ ಮತದಾರರಿಂದ ದಾಖಲೆಗಳ ಸಲ್ಲಿಕೆ

Update: 2025-08-24 15:31 IST

ಚುನಾವಣಾ ಆಯೋಗ | PTI

ಪಾಟ್ನಾ,ಆ.24: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಹಂತ 2ರ ಭಾಗವಾಗಿ ಕರಡು ಮತದಾರರ ಪಟ್ಟಿಗಳಲ್ಲಿರುವ ಶೇ.98.2 ಮತದಾರರಿಂದ ದಾಖಲೆಗಳನ್ನು ಸ್ವೀಕರಿಸಿರುವುದಾಗಿ ಚುನಾವಣಾ ಆಯೋಗವು ರವಿವಾರ ಪ್ರಕಟಿಸಿದೆ. ದಾಖಲೆಗಳ ಸಲ್ಲಿಕೆಗೆ ಸೆ.1 ಕೊನೆಯ ದಿನಾಂಕವಾಗಿದೆ.

ಜೂ.25 ಮತ್ತು ಜು.25ರ ನಡುವೆ ದಾಖಲೆಗಳನ್ನು ಸಂಗ್ರಹಿಸಲಾಗಿದ್ದ ಮೊದಲ ಹಂತದ ಎಸ್‌ಐಆರ್‌ನಂತೆ ಎರಡನೇ ಹಂತದಲ್ಲಿಯೂ ದಾಖಲೆಗಳ ಸಂಗ್ರಹ ಕಾರ್ಯವು ನಿಗದಿತ ಗಡುವಿಗೆ ಮೊದಲೇ ಪೂರ್ಣಗೊಳ್ಳಲಿದೆ. ಜು.1ರ ವೇಳೆಗೆ 3,28,847 ಹೊಸ ಮತದಾರರು 18 ವರ್ಷ ಅಥವಾ ಹೆಚ್ಚಿನ ವಯಸ್ಸಿನವರಾಗಿದ್ದು, ಅ.1ಕ್ಕೆ 18 ವರ್ಷ ಪೂರೈಸಲಿರುವ ಮತದಾರರೂ ನೋಂದಣಿಗೆ ಅಗತ್ಯವಾದ ಫಾರ್ಮ್ 6ನ್ನು ಸಲ್ಲಿಸಿದ್ದಾರೆ ಎಂದು ಆಯೋಗವು ತಿಳಿಸಿದೆ.

ಚುನಾವಣಾ ನೋಂದಣಾಧಿಕಾರಿಗಳು ಮತ್ತು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು ಎಲ್ಲ ಹಕ್ಕು ಕೋರಿಕೆಗಳು ಮತ್ತು ಆಕ್ಷೇಪಣೆಗಳ ಕುರಿತು ಸೆ.25ರೊಳಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಚುನಾವಣಾ ಆಯೋಗವು ಜೂ.24ರಂದು ಬಿಹಾರದಲ್ಲಿ ಎಸ್‌ಐಆರ್‌ಗೆ ಆದೇಶಿಸಿದಾಗ ರಾಜ್ಯದಲ್ಲಿ 7.89 ಕೋ. ನೋಂದಾಯಿತ ಮತದಾರರಿದ್ದು, ಜು.25ರವರೆಗೆ 7.24 ಕೋಟಿ ಮತದಾರರಿಂದ ಎಣಿಕೆ ನಮೂನೆಗಳನ್ನು ಸ್ವೀಕರಿಸಲಾಗಿತ್ತು ಮತ್ತು ಅವರ ಹೆಸರುಗಳು ಆ.1ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಗಳಲ್ಲಿ ಸೇರ್ಪಡೆಗೊಂಡಿದ್ದವು. ಉಳಿದ ಸುಮಾರು 65 ಲಕ್ಷ ಮತದಾರರನ್ನು ಮೃತಪಟ್ಟಿದ್ದಾರೆ, ಸ್ಥಳಾಂತರಗೊಂಡಿದ್ದಾರೆ, ಬಹು ಸ್ಥಳಗಳಲ್ಲಿ ನೋಂದಣಿ ಮಾಡಿಸಿದ್ದಾರೆ ಅಥವಾ ಬೂತ್ ಮಟ್ಟದ ಅಧಿಕಾರಿಗಳಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲದವರು ಎಂದು ಗುರುತಿಸಿ ಅವರ ಹೆಸರುಗಳನ್ನು ಪಟ್ಟಿಗಳಿಂದ ಅಳಿಸಲಾಗಿತ್ತು.

ಬಿಹಾರದಲ್ಲಿ ಕೊನೆಯ ಬಾರಿಗೆ ಎಸ್‌ಐಆರ್ ನಡೆದಿದ್ದ 2003ರ ಬಳಿಕ ಮತದಾರರ ಪಟ್ಟಿಗಳಲ್ಲಿ ಸೇರ್ಪಡೆಗೊಂಡ ಮತದಾರರು ತಮ್ಮ ಅರ್ಹತೆಯನ್ನು ಸಾಬೀತುಗೊಳಿಸಲು ಪೌರತ್ವ ಸೇರಿದಂತೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಿದೆ. ಸೆ.30ರಂದು ಪ್ರಕಟಗೊಳ್ಳಲಿರುವ ಅಂತಿಮ ಮತದಾರರ ಪಟ್ಟಿಗಳಲ್ಲಿ ಸೇರ್ಪಡೆಗೊಳ್ಳಲು ಮತದಾರರು ಸೆ.1ರೊಳಗೆ ತಮ್ಮ ದಾಖಲೆಗಳನ್ನು ಸಲ್ಲಿಸುವುದು ಅಗತ್ಯವಾಗಿದೆ. ಜು.1ಕ್ಕೆ 18 ವರ್ಷ ತುಂಬಿದ ಹೊಸ ಮತದಾರರು ಮತ್ತು ತಪ್ಪಾಗಿ ಮತದಾರರ ಪಟ್ಟಿಗಳಲ್ಲಿ ಹೆಸರು ಅಳಿಸಲಾಗಿರುವ ಮತದಾರರೂ ಸೆ.1ರೊಳಗೆ ಹಕ್ಕು ಕೋರಿಕೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News