ಬಿಹಾರ: ದುರ್ಗಾಪೂಜೆ ಪೆಂಡಾಲ್ ನಲ್ಲಿ ಕಾಲ್ತುಳಿತ; ಬಾಲಕ ಸೇರಿ ಮೂವರು ಮೃತ್ಯು
Update: 2023-10-24 09:32 IST
Photo: twitter.com/htTweets
ಪಾಟ್ನಾ: ದುರ್ಗಾಪೂಜೆ ಪೆಂಡಾಲ್ ನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಐದು ವರ್ಷದ ಪುಟ್ಟ ಬಾಲಕ ಮತ್ತು ಇಬ್ಬರು ಮಹಿಳೆಯರು ಸೇರಿ ಮೂವರು ಬಲಿಯಾದ ಘಟನೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ಸಂಜೆ ಈ ದುರಂತ ನಡೆದಿದೆ. ದುರ್ಗಾಪೂಜೆಯ ಸಂದರ್ಭದಲ್ಲಿ ರಾಜಾದಾಲ್ ಪ್ರದೇಶದಲ್ಲಿ ಜನ ಜಮಾಯಿಸಿದ್ದ ವೇಳೆ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಾಲ್ ಗಂಜ್ ಜಿಲ್ಲಾಧಿಕಾರಿ ನವಲ್ ಕಿಶೋರ್ ಚೌಧರಿ, ದುರ್ಗಾನವಮಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲವು ದುರ್ಗಾ ಪೂಜೆ ಪೆಂಡಾಲ್ ಗಳು ತಲೆ ಎತ್ತಿದ್ದವು. ಹಬ್ಬದ ಸಂಭ್ರಮದ ವೇಳೆ ನೂಕುನುಗ್ಗಲಿನಲ್ಲಿ ಪುಟ್ಟ ಮಗು ಬಿದ್ದಾಗ ಅದನ್ನು ರಕ್ಷಿಸಲು ಮುಂದಾದ ಇಬ್ಬರು ಮಹಿಳೆಯರು ಕೂಡಾ ಮೇಲೇಳಲು ಸಾಧ್ಯವಾಗದೇ ಈ ಸಾವು ಸಂಭವಿಸಿದೆ. ಮಹಿಳೆಯರನ್ನು 200 ಮೀಟರ್ ದೂರದ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು ಎಂದು ಅವರು ಹೇಳಿದ್ದಾರೆ.