×
Ad

ಬಿಜೆಪಿಯಿಂದ ಕಣಕ್ಕಿಳಿದ ಬಿಜೆಡಿ ಪಕ್ಷದ ಸಂಸ್ಥಾಪಕ ಸದಸ್ಯ

Update: 2024-03-29 08:32 IST

ಭರತ್ರುಹರಿ ಮಹ್ತಾಬ್ Photo: PTI

ಭುವನೇಶ್ವರ: ಬಿಜು ಜನತಾದಳ ಸ್ಥಾಪಕ ಸದಸ್ಯ ಹಾಗೂ ಆರು ಬಾರಿ ಕಟಕ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಭರತ್ರುಹರಿ ಮಹ್ತಾಬ್ ಗುರುವಾರ ಬಿಜೆಪಿ ಸೇರಿದ್ದು, ಕೇಸರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿಗೆ ಇದು ದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ.

ಮಹ್ತಾಬ್ ಅವರ ಹೊರತಾಗಿ ಬಿಜೆಪಿಯ ನೈತಿಕ ಬಲವನ್ನು ಹೆಚ್ಚಿಸುವ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ, ಎರಡು ಬಾರಿಯ ಮಾಜಿ ಬಿಜೆಪಿ ಬೆಹ್ರಾಂಪುರ ಸಂಸದ ಮತ್ತು ನಟ ಸಿದ್ಧಾಂತ್ ಮೊಹಾಪಾತ್ರ ಹಾಗೂ ಸಂತಾಲಿ ಲೇಖಕ ದಮಯಂತಿ ಬೆಶ್ರಾ ಕೂಡಾ ಕೇಸರಿ ಪಕ್ಷ ಸೇರಿದ್ದಾರೆ.

ಮಾರ್ಚ್ 22ರಂದು ಬಿಜೆಡಿಗೆ ರಾಜೀನಾಮೆ ನೀಡಿದ ಬಳಿಕ ಮಹ್ತಾಬ್, ಬಿಜೆಪಿ ಟಿಕೆಟ್ ನಿಂದ ಕಟಕ್ ಕ್ಷೇತ್ರದಿಂದ ಸ್ಪರ್ಧಿಸುವ ವದಂತಿ ಇತ್ತು. ಬಿಜೆಪಿ ಇದುವರೆಗೆ ರಾಜ್ಯದ 21 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಕಟಕ್, ಖಂದಮಾಲ್ ಮತ್ತು ಜಾಜ್ಪುರ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಒಂದು ವೇಳೆ ಬಿಜೆಪಿ ಮಹ್ತಾಬ್ ಅವರನ್ನು ಕಣಕ್ಕೆ ಇಳಿಸಿದರೆ, ಬಿಜೆಡಿಯ ಸಂತೃಪ್ತ ಮಿಶ್ರಾ ಅವರನ್ನು ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಎದುರಿಸಬೇಕಾಗುತ್ತದೆ.

ದೆಹಲಿಯಲ್ಲಿ ಬಿಜೆಪಿ ಸೇರಿದ ಬಳಿಕ ಮಾತನಾಡಿದ ಮಹ್ತಾಬ್, ಇದರಿಂದ ಒಡಿಶಾದ ಈ ಅನಿವಾರ್ಯ ಬದಲಾವಣೆಯನ್ನು ಗಮನಿಸಬಹುದು ಎಂದು ಅಧಿಕಾರದಲ್ಲಿರುವ ನವೀನ್ ಪಟ್ನಾಯಕ್ ಅವರ ಸೋಲಿನ ಸುಳಿವು ನೀಡಿದ್ದಾರೆ. "ಹೊಸ ತಂಡದ ಜತೆ ಕಾರ್ಯ ನಿರ್ವಹಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳನ್ನು ಶ್ಲಾಘಿಸಿದ ಅವರು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News