×
Ad

ಬಿಜೆಪಿ ನನಗೆ ಎರಡನೇ ಅವಕಾಶವನ್ನೇ ನೀಡಲಿಲ್ಲ: ಬ್ರಿಜ್ ಭೂಷಣ್ ಬಹಿರಂಗ ಅತೃಪ್ತಿ

Update: 2024-07-30 10:47 IST

PC: PTI

ಲಕ್ನೋ: ಬಿಜೆಪಿ ನನಗೆ ಎರಡನೇ ಅವಕಾಶವನ್ನೇ ನೀಡಿಲ್ಲ ಎಂದು ಕೈಸರ್ ಗಂಜ್ ಕ್ಷೇತ್ರದ ಮಾಜಿ ಸಂಸದ ಮತ್ತು ಭಾರತೀಯ ಕುಸ್ತಿ ಫಡೆರೇಷನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ಅವರಿಗೆ ಪಕ್ಷ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿತ್ತು.

ಲೈಂಗಿಕ ಕಿರುಕುಳದ ಆರೋಪದಿಂದಾಗಿ ಟಿಕೆಟ್ ಕೈ ತಪ್ಪಿತೇ ಎಂದು ಕಳೆದ ಮೇ ತಿಂಗಳಲ್ಲಿ ಪ್ರಶ್ನಿಸಿದಾಗ, "ನನ್ನ ಪುತ್ರ ಟಿಕೆಟ್ ಪಡೆದಿದ್ದಾನೆ" ಎಂದು ಹೇಳಿದ್ದರು. 2009ರಿಂದ ತಂದೆ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಕರಣ್ ಭೂಷಣ್ ಸಿಂಗ್ 2024ರ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.

ಪರಸ್ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್, "ಬಿಜೆಪಿ ಎಂದೂ ನನಗೆ ಎರಡನೇ ಅವಕಾಶವನ್ನೇ ನೀಡಲಿಲ್ಲ. ಪಕ್ಷ ನನಗೆ ಅವಕಾಶ ನೀಡುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ನಾನು ಮುಂಗೇರಿಲಾಲ್ ಅವರಂತೆ ಕನಸು ಕಾಣುವುದಿಲ್ಲ. ಅವರು ಬಯಸಿದರೆ ಆಗಬಹುದು" ಎಂದು ವಿವರಿಸಿದರು.

ಲೈಂಗಿಕ ಕಿರುಕುಳದ ಆರೋಪದ ಬೆನ್ನಲ್ಲೇ ದೇಶದ ಅಗ್ರಗಣ್ಯ ಕುಸ್ತಿಪಟುಗಳು ಹಲವು ವಾರಗಳ ಕಾಲ ಪ್ರತಿಭಟನೆ ನಡೆಸಿದ ಬಳಿಕ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ಇವರನ್ನು ವಜಾಗೊಳಿಸಲಾಗಿತ್ತು. ಲೋಕಸಭಾ ಚುನಾವಣೆಗೂ ಸ್ಪರ್ಧಿಸಲು ಅವಕಾಶ ನೀಡದೇ ಅವರ ಪುತ್ರನನ್ನು ಕಣಕ್ಕೆ ಇಳಿಸಲಾಗಿತ್ತು. ಕಳೆದ ವಾರ ಪ್ರಕರಣದ ವಿಚಾರಣೆ ಆರಂಭವಾಗಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ತಮ್ಮ ಹಿಂದಿನ ಕ್ಷೇತ್ರಕ್ಕೆ ಪ್ರವಾಸ ಕೈಗೊಂಡಿರುವ ಬ್ರಿಜ್ ಭೂಷಣ್, ಹಾಡಹಗಲೇ ಎಸ್ಪಿ ಮುಖಂಡ ಓಂ ಪ್ರಕಾಶ್ ಸಿಂಗ್ ಹತ್ಯೆಗೀಡಾದ ಪರಸ್ ಪುರದಲ್ಲಿ, ಎಸ್ಪಿ ಮುಖಂಡನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News